ಬೀದರ: ಭಾಲ್ಕಿ ತಾಲೂಕಿನಲ್ಲಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ಆಗಿರುವುದು ರಾಜೀವ ಗಾಂಧಿ ವಸತಿ ನಿಗಮದ ತನಿಖಾ ವರದಿಯಿಂದ ಸಾಬೀತಾಗಿದೆ. ಅವ್ಯವಹಾರ ನಡೆದಿದ್ದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಶಾಸಕ ಈಶ್ವರ ಖಂಡ್ರೆ ನುಡಿದಂತೆ ನಡೆಯಲಿ ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದರು.
2015-16, 2017-18ರಲ್ಲಿ ತಾಲೂಕಿಗೆ ಮಂಜೂರಾದ 17 ಸಾವಿರ ಚಿಲ್ಲರೆ ಮನೆಗಳ ಪೈಕಿ 9710 ಮನೆಗಳ ಫಲಾನುಭವಿಗಳ (ನಗರ-ಗ್ರಾಮೀಣ) ಆಯ್ಕೆಯಲ್ಲಿ ಬೊಗಸ್ ಆಗಿದೆ. ಅವ್ಯವಹಾರದ ದೂರಿನ ಮೇರೆಗೆ ವಸತಿ ಖಾತೆ ಸಚಿವರು ವಸತಿ ನಿಗಮದಿಂದ ತನಿಖೆ ನಡೆಸಿದ್ದಾರೆ. ಈಗ ಅಕ್ರಮ ಆಗಿರುವುದು ತನಿಖಾ ವರದಿಯಲ್ಲಿ ಉಲ್ಲೇಖೀತವಾಗಿದೆ. 91 ಕೋಟಿ ರೂ. ಮೊತ್ತದ 9710 ಮನೆಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಕ್ಷೇತ್ರದ ಶಾಸಕ ಖಂಡ್ರೆ ನೇರ ಹೊಣೆಗಾರರು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮನೆ ನೀಡುವುದು ಹಾಗೂ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ಗ್ರಾಪಂಗೆ ಇದೆ. ಆದರೆ, ಭಾಲ್ಕಿಯಲ್ಲಿ ಇಡೀ ತಾಲೂಕಿನ ಫಲಾನುಭವಿಗಳ ಆಯ್ಕೆಯನ್ನು ಶಾಸಕ ಖಂಡ್ರೆ ಮಾಡಿದ್ದಾರೆ. ಮನೆ ಹಂಚಿಕೆ ಮಂಜೂರಾತಿ ಪತ್ರ, ಫಲಾನುಭವಿಗಳ ಪಟ್ಟಿಯನ್ನು ಶಾಸಕರ ಮನೆಯಲ್ಲಿನ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿ ಖಂಡ್ರೆ ಅವರೇ ಸ್ವತಃ ಸಹಿ ಮಾಡಿ ಜನರಿಗೆ ನೀಡಿದ್ದಾರೆ. ಖಂಡ್ರೆ ಅವರ ಕಾರ್ ಡ್ರೈವರ್, ಅವರ ಪಿಎ ಅವರು ಒಂದೊಂದು ದಿನ 900 ಮನೆಗಳ ಜಿಪಿಎಸ್ ಮಾಡಿದ್ದಾರೆ. ಆ ಮೂಲಕ ಶಾಸಕರು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಶಾಸಕ ಈಶ್ವರ ಖಂಡ್ರೆ ನುಡಿದಂತೆ ನಡೆಯುವವರು. ಹೀಗಾಗಿ, ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದರೆ ರಾಜೀನಾಮೆ ನೀಡಿ ರಾಜಕೀಯ ಜೀವನದಿಂದ ದೂರ ಇರುವುದಾಗಿ ತಿಳಿಸಿದ್ದರು. ಇದೀಗ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದು ಸಾಬೀತಾಗಿದೆ. ಹಾಗಾಗಿ ನುಡಿದಂತೆ ನಡೆದು ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ದೂರ ಇರಬೇಕು. ರಾಜೀನಾಮೆ ನೀಡದೇ ಭಂಡತನ ತೋರಿದರೆ, ಸದನದೊಳಗೆ ಸಚಿವ ಚವ್ಹಾಣ, ಪರಿಷತ್ತಿನಲ್ಲಿ ರಘುನಾಥ ಮಲ್ಕಾಪುರೆ, ಹೊರಗಡೆ ನಾನು, ಪಕ್ಷ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ಸಂಘರ್ಷಕ್ಕಿಳಿಯುವೆ ಎಂದು ಎಚ್ಚರಿಸಿದರು. ಎಂಎಲ್‌ಸಿ ರಘುನಾಥ ಮಲ್ಕಾಪುರೆ, ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಸುದ್ದಿಗೋಷ್ಠಿಯಲ್ಲಿದ್ದರು.
91 ಕೋಟಿ ರೂ. ಖಂಡ್ರೆ ಭರಿಸಲಿ ವಸತಿ ಯೋಜನೆಯಡಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ತಾಪಂ ಇಒ ಅವರನ್ನು ಅಮಾನತುಗೊಳಿಸಿದ್ದಾರೆ. ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ. ಇಡೀ ಅವ್ಯವಹಾರದ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ಖಂಡ್ರೆ ಹೊರಬೇಕು ಮತ್ತು ಸರ್ಕಾರ ಬೊಕ್ಕಸಕ್ಕೆ ಆಗಿರುವ 91 ಕೋಟಿ ರೂ. ಹಾನಿಯನ್ನು ಸ್ವಂತ ಹಣದಿಂದ ಭರಿಸಬೇಕು. ಅಧಿಕಾರಿಗಳು ತಪ್ಪು ಮಾಡದೇ ಇದ್ದರೆ, ಅಂತಹವರನ್ನು ಉಳಿಸುವ ಕೆಲಸವನ್ನು ಖಂಡ್ರೆ ಮಾಡಲಿ.
ಭಗವಂತ ಖೂಬಾ,
ಸಂಸದರು