ಬೀದರ: ಬೀದರ ಜಿಲ್ಲೆಯಲ್ಲಿಯೂ ಕಿಸಾನ್ ಸಮ್ಮಾನ್ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. 1.61 ಲಕ್ಷ ಅರ್ಹ ರೈತ ಕುಟುಂಬಗಳು ಯೋಜನೆಯಲ್ಲಿ ನೋಂದಾಯಿತರಾಗಿದ್ದು, ಅವರಲ್ಲಿ 89500 ರೈತರಿಗೆ 53.66 ಲಕ್ಷ ರೂ. ಖಾತೆಗೆ ಜಮೆಯಾಗಿದ್ದು ದಾಖಲೆಯಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಳಪ್ಪ ಕಮತಗಿ ತಿಳಿಸಿದರು.
ನಗರದ ನೌಬಾದನ ಸಹಾರ್ದ ತರಬೇತಿ ಕೇಂದ್ರದಲ್ಲಿ ಅಣದೂರು, ಕೋಳಾರ, ನೌಬಾದ ಮತ್ತು ಬೆಳ್ಳೂರು ಗ್ರಾಮಗಳ ರೈತರಿಗಾಗಿ ಆಯೋಜಿಸಲಾಗಿದ್ದ ಕಿಸಾನ್ ಸಮ್ಮಾನ್ ಯೋಜನೆ ವಾರ್ಷಿಕೋತ್ಸವ ಮತ್ತು ಪ್ರಧಾನ ಮಂತ್ರಿಗಳ ರೈತ ಸಂವಾದದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ಸಾಲ ವಿತರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ 1.89 ಲಕ್ಷ ಅರ್ಹ ರೈತರನ್ನು ಯೋಜನೆಯಡಿ ನೋಂದಾಯಿಸುವ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ರೈತರು ಕೂಡಲೇ ಸೂಕ್ತ ದಾಖಲೆ ಪತ್ರ ಬ್ಯಾಂಕಿಗೆ ನೀಡಿ ಸಹಕರಿಸಬೇಕು ಎಂದರು.
ರೈತರು ಕೂಡ ಸೂಕ್ತ ದಾಖಲೆ ಪತ್ರಗಳ ಮುಖ್ಯವಾಗಿ ಆಧಾರ್ ಕಾರ್ಡ್ ಜೋಡಣೆಯಿಂದ ಯೋಜನೆಯಲ್ಲಿ ಅರ್ಹತೆ ಪಡೆಯಬಹುದಾಗಿದ್ದು ತಮ್ಮ ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು. ಜಿಲ್ಲೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಗರಿಷ್ಠ ಸಾಧನೆ ಮಾಡಿದ್ದು, 1.43 ಲಕ್ಷ ರೈತರನ್ನು ನೋಂದಾಯಿಸಿದೆ. ಅವರಲ್ಲಿ 73,780 ರೈತರಿಗೆ
44.66 ಲಕ್ಷ ರೂ. ಈಗಾಗಲೇ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಿಇಒ ಮಹಾಜನ ಮಲ್ಲಿಕಾರ್ಜುನ ಮಾತನಾಡಿ, ಕೃಷಿ ಸಾಲ ಪಡೆದ ರೈತರು ಅದನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿ ಸಬೇಕು. ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿ ಸಂಭವಿಸಿದಾಗ ನೆರವು ನೀಡಲೆಂದು ಫಸಲ್ ಬೀಮಾ ಯೋಜನೆಯಿದೆ. ಇದರ ಸುಪಯೋಗ ಪಡೆಯಬೇಕು ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಕೃಷಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ, ನೌಬಾದ ಪಿಕೆಪಿಎಸ್‌ನ ಅಧ್ಯಕ್ಷ ಏಕನಾಥರಾವ್, ಅನಿಲಕುಮಾರ ಪರಶೆಣೆ, ತನ್ವಿರ ರಜಾ, ನಾಗಶಟ್ಟಿ ಘೋಡಂಪಳ್ಳಿ ಸೇರಿದಂತೆ ರೈತ ಮಹಿಳೆಯರು ಉಪಸ್ಥಿತರಿದ್ದರು.
ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.