ಬೀದರ: ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕುಸಿದಿರುವ ರೈತರು, ಕಾರ್ಮಿಕರ ಕೈಗೆ ಒಂದಿಷ್ಟು ಉದ್ಯೋಗ ಮತ್ತು ಹಣದ ನೆರವು ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಆದರೆ, ಮಹಾಮಾರಿ ಕೋವಿಡ್ ಭೀತಿಗೆ ಕೂಲಿ ಕೆಲಸ ಮಾಡಲು ಕಾರ್ಮಿಕರೇ ಬರುತ್ತಿಲ್ಲ. ಹಾಗಾಗಿ ಸರ್ಕಾರದ ಕಾಳಜಿಗೆ ಫಲ ಸಿಗದಂತಾಗಿದೆ.
ವಿಶ್ವದೆಲ್ಲೆಡೆ ಸಾವಿನ ರಣಕೇಕೆ ಹಾಕುತ್ತಿರುವ ಕೊವೀಡ್-19 ವೈರಸ್ ಗಡಿ ಜಿಲ್ಲೆಗೂ ವಕ್ಕರಿಸಿದ್ದು, ಈಗಾಗಲೇ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವೈರಸ್‌ನ ಭೀತಿ ನಗರವಷ್ಟೇ ಅಲ್ಲ ಹಳ್ಳಿ ಜನರಲ್ಲೂ ಆತಂಕ ಹೆಚ್ಚಿಸಿದೆ. ಬಹುತೇಕ ಊರುಗಳಲ್ಲಿ ಗ್ರಾಮಸ್ಥರೇ ಮುಳ್ಳು- ಬೇಲಿಗಳಿಂದ ದಿಗ್ಬಂಧನ ಹಾಕಿಕೊಂಡಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಗ್ರಾಮೀಣ ಭಾಗದಲ್ಲಿ ಮಹತ್ವಕಾಂಕ್ಷಿ ನರೇಗಾ ಯೋಜನೆ ಮುಂದುವರಿಸಿ ಕಾರ್ಮಿಕರಿಗೆ ಉದ್ಯೋಗ ಸಿಗಲಿ ಎಂಬುದು ಸರ್ಕಾರದ ಆಲೋಚನೆ. ಆದರೆ, ಯೋಜನೆ ಅನುಷ್ಠಾನಕ್ಕೆ ಕಾರ್ಮಿಕರ ಕೊರತೆ ಕಾಡುತ್ತಿದೆ.
ಶೇ. 8.72ರಷ್ಟು ಮಾತ್ರ ಸಾಧನೆ: ನರೇಗಾ ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳು ಸೇರಿ 1,59,473 ನೋಂದಾಯಿತ ಕುಟುಂಬಗಳಿವೆ. (3.17 ಲಕ್ಷ ಕೂಲಿಕಾರರು), ಅದರಲ್ಲಿ 90 ಸಾವಿರ ಕುಟುಂಬಗಳು ಸಕ್ರಿಯವಾಗಿವೆ. 2020-21ನೇ ಸಾಲಿನ ಆರ್ಥಿಕ ವರ್ಷಾಂತ್ಯಕ್ಕೆ 45,01,005 ಮಾನವ ದಿನಗಳು ಸೃಜನೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಮಾಹೆಯಾಗಿರುವ ಏಪ್ರಿಲ್‌ನಲ್ಲಿ 2.61 ಲಕ್ಷ ಮಾನವ ದಿನಗಳಿಗೆ ಕೆಲಸ ನೀಡುವ ಗುರಿ ಇದೆ. ಆದರೆ, 21 ದಿನಗಳಲ್ಲಿ ಕೇವಲ ಶೇ. 8.72 (22,766 ಮಾನವ ದಿನ) ಮಾತ್ರ ಗುರಿ ಸಾಧಿಸಿ, ಕಾರ್ಮಿಕರಿಗೆ 35 ಲಕ್ಷ ರೂ. ವೇತನ ನೀಡಲಾಗಿದೆ. ಈ ಕುಸಿತಕ್ಕೆ ಕೊರೊನಾ ಸೃಷ್ಟಿಸಿರುವ ಆತಂಕವೇ ಮುಖ್ಯ ಕಾರಣ. ಜಿಲ್ಲೆಯ ಒಟ್ಟು 185 ಗ್ರಾಪಂಗಳ ಪೈಕಿ ಸದ್ಯ 140 ಗ್ರಾಪಂಗಳಲ್ಲಿ ಮಾತ್ರ ನರೇಗಾ ಸಕ್ರಿಯವಾಗಿದೆ. ಇನ್ನುಳಿದ 45 ಪಂಚಾಯತ್ ಗಳಲ್ಲಿ ಪ್ರಸಕ್ತ ವರ್ಷದಲ್ಲಿ ಖಾತ್ರಿ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕೊವೀಡ್-19 ದಿಂದಾಗಿ ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಸಾವಿರಾರು ಕುಟುಂಬಗಳು ತವರಿಗೆ ಮರಳಿವೆ. ಆದರೂ ನರೇಗಾ ಕೆಲಸಕ್ಕೆ ಅರ್ಜಿ ಹಾಕುವವರೇ ಇಲ್ಲವಾಗಿದೆ. ಈ ಹಿಂದೆ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಅರ್ಜಿ ಹಾಕಿದರೂ ಕೈಗೆ ಉದ್ಯೋಗ ಸಿಗುತ್ತಿರಲಿಲ್ಲ. ಆದರೆ, ಈಗ ಉದ್ಯೋಗಕ್ಕೆ ಖಾತ್ರಿ ಇದ್ದರೂ ಕಾರ್ಮಿಕರು ಬರುತ್ತಿಲ್ಲ.
ನೀರು ಸಂಗ್ರಹ ಕಾಮಗಾರಿ: ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಕಾಮಗಾರಿಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದು ಸೇರಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಮಳೆಗಾಲ ಶುರುವಾಗುವ ಹಿನ್ನೆಲೆಯಲ್ಲಿ ನರೇಗಾದಡಿ ಸದ್ಯ ನೀರು ಸಂಗ್ರಹ ಕಾಮಗಾರಿಗಳಾದ ಕೆರೆ, ಚೆಕ್ ಡ್ಯಾಂ ಹೂಳೆತ್ತುವಿಕೆ ಮತ್ತು ಹೊಲದ ಬದು ನಿರ್ಮಿಸಿಕೊಳ್ಳುವ ಕಾಮಗಾರಿಗೆ ಅವಕಾಶ ನೀಡಲಾಗುತ್ತಿದೆ.
ಅಧಿಕಾರಿಗಳ ಕಸರತ್ತು
ಬೀದರ ಜಿಲ್ಲೆಯ 185 ಗ್ರಾಪಂಗಳ ಪೈಕಿ 140 ಪಂಚಾಯತ್‌ನಲ್ಲಿ ನರೇಗಾ ಕಾಮಗಾರಿಗಳು ನಡೆಯುತ್ತಿದೆ. ಏಪ್ರಿಲ್ ತಿಂಗಳಾಂತ್ಯಕ್ಕೆ 2.61 ಲಕ್ಷ ಮಾನವ ದಿನಗಳ ಸೃಜನೆ ಗುರಿ ಇದ್ದು, ಶೇ.8.72ರಷ್ಟು ಗುರಿ ಸಾಧಿಸಲಾಗಿದೆ. ಕೊರೊನಾ ಸೋಂಕು ಭೀತಿಯಿಂದ ಕಾರ್ಮಿಕರ ಕೊರತೆಯಾಗುತ್ತಿದೆ. ನೋಂದಾಯಿತ ಕಾರ್ಮಿಕರನ್ನು ಭೇಟಿ ಮಾಡಿ ನರೇಗಾದಡಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪ್ರಯತ್ನ ನಡೆದಿದೆ.
ಶಶಿಕಾಂತ ಬಂಬುಳಗೆ