Advertisement

ಪಂಚಾಕ್ಷರ ಗವಾಯಿ ಅಂಧರ ಹೊಂಬೆಳಕು

03:55 PM Feb 29, 2020 | Naveen |

ಬೀದರ: ಅಂಧ- ಅನಾಥ ಕಲಾವಿದರಿಗಾಗಿ ಭಿಕ್ಷೆ ಬೇಡಿ ಸಲಹುತಿದ್ದ ಪಂಚಾಕ್ಷರಿ ಗವಾಯಿಗಳು ನಾಡಿನ ಮಹಾನ್‌ ಚೇತನರಾಗಿದ್ದರು. ಅಂಧರ ಹೊಂಬೆಳಕು ಪಂಚಾಕ್ಷರರಾಗಿದ್ದರು ಎಂದು ಬಸವ ಮುಕ್ತಿ ಮಂದಿರದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಬಣ್ಣಿಸಿದರು.

Advertisement

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪಂಚಾಕ್ಷರ ಗವಾಯಿ 75ನೇ ಪುಣ್ಯತಿಥಿ ಆಚರಣೆ ಹಾಗೂ ಸಂಘದ 17ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ನಗರದ ಡಾ| ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂಗೀತ ಹಾಗೂ ನೃತ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ಧ್ವನಿಯಲ್ಲಿ ಪಂ| ಪಂಚಾಕ್ಷರರು ಜೀವಂತವಾಗಿದ್ದಾರೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿ, ಸಂಗೀತ ಸೇವೆಯಲ್ಲೇ ತಮ್ಮ ಬದುಕು ಸವಿಸಿದ್ದ ಶ್ರೀ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್‌ ಸಾಧಕರಾಗಿದ್ದಾರೆ. ಗವಾಯಿಗಳು ಸಂಗೀತ ಕಲಿಯಲು ಹಾಗೂ ಕಲಿಸುವುದಕ್ಕಾಗಿ ತಮ್ಮ ಬದುಕು ಮೀಸಲಿಟ್ಟಿದ್ದರು. ಒಂದು ಜನ್ಮದಲ್ಲಿ ಪೂರ್ತಿಯಾಗಿ ಸಂಗೀತ ಕಲಿಯಲಾಗದು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಕಲಿತುಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದಂತಿತ್ತು ಎಂದು ಹೇಳಿದರು.

ಗವಾಯಿಗಳು ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳೆರಡರಲ್ಲೂ ಪ್ರಸಿದ್ಧ ಗಾಯಕ ಎನಿಸಿಕೊಂಡಿದ್ದರು. ತಬಲಾ, ಪಿಟೀಲು, ಹಾರ್ಮೋನಿಯಂ, ಪಖಾವಜ್‌, ಸಾರಂಗಿ, ದಿಲ್‌ರುಬಾ, ಕೊಳಲು, ಶಹನಾಯಿ ವಾದನ ನುಡಿಸುವಲ್ಲಿಯೂ ಪ್ರಾವಿಣ್ಯ ಹೊಂದಿದ್ದರು. ವಾದನ ಕ್ಷೇತ್ರದಲ್ಲೂ ಶ್ರೇಷ್ಠರು ಎನಿಸುವಂಥ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಗವಾಯಿಗಳು ಪ್ರಾರಂಭಿಸಿದ ಸಂಗೀತ ಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಹೇಳಿಕೊಡಲಾಗುತ್ತಿತ್ತು. ಸಂಗೀತ ಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿ ಪ್ರಾರಂಭಿಸಿ ನಷ್ಠ ಅನುಭವಿಸಿದ್ದರು. ಬಸರಿಗಿಡದ ವೀರಪ್ಪನವರು ಗದಗಿನಲ್ಲಿ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯ ಸಹ ನೀಡಿದರು. ಸಂಗೀತಶಾಲೆಗೆ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮ ಎಂದೇ ಹೆಸರಿಟ್ಟರು ಎಂದು ಹೇಳಿದರು.

Advertisement

ಪಂಚಾಕ್ಷರಿ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ಅವರ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ನಿರಂತರ ಸಂಗೀತಾಭ್ಯಾಸ ಅವರನ್ನು ಸಾಧನೆ ಶಿಖೀರಕ್ಕೆ ತಲುಪಿಸಿತ್ತು. ಯಾವ ಪ್ರಶಸ್ತಿಯೂ ಗವಾಯಿಗಳ ಸಾಧನೆ ಘನತೆಗೆ ದೊಡ್ಡದಲ್ಲ ಎಂದೇ ಹೇಳಬೇಕಾಗುತ್ತದೆ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಉಸ್ತಾದ್‌ ಶೇಖ್‌ ಹನ್ನೂಮಿಯಾ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಬಿ. ಲಕ್ಷ್ಮಣರಾವ್‌ ಆಚಾರ್ಯ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ ಬೇಜಗಂ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌.ಸಿ. ಚಂದ್ರಶೇಖರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಮಲ್ಲಿಕಾರ್ಜುನ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಸಾಹಿತಿ ವಿ.ಎಂ. ಡಾಕುಳಗಿ, ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ, ಪತ್ರಕರ್ತ ಸಂಜಯ ದಂತಕಾಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರೊ| ದೇವೇಂದ್ರ ಕಮಲ, ಎಸ್‌.ಬಿ. ಬಿರಾದಾರ, ಮುರಳಿ ನಾಶಿ, ಆರ್‌.ಜಿ. ಮಠಪತಿ, ನಿರಂಜನಸ್ವಾಮಿ, ಶಿವಶರಣಪ್ಪ ವಾಲಿ, ಕಾಶಪ್ಪ ಧನ್ನೂರ ಇದ್ದರು. ಸಂಘದ ಅಧ್ಯಕ್ಷ ಎಸ್‌.ವಿ.ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶವಂತ ಯಾತನೂರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ ಸೋನಾರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next