ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಮಂಗಳವಾರ ಬೀದರ ಪ್ರಾದೇಶಿಕ ಸಾರಿಗೆ ಕಚೇರಿಗೆ ದಿಢೀರ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಆಯಾ ವಿಭಾಗಗಳಿಗೆ ತೆರಳಿ ಸಿಬ್ಬಂದಿ ನಿರ್ವಹಿಸುತ್ತಿದ್ದ ಕಾರ್ಯಗಳನ್ನು ಪರಿಶೀಲನೆ ನಡೆಸಿದರು. ಸರಿಯಾಗಿ ಕೆಲಸ ನಿರ್ವಹಿಸುವಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಸಾರಿಗೆ ಇಲಾಖೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ತಾವು ಬೆಂಗಳೂರಿನಿಂದ ನೇರವಾಗಿ ಆರ್‌ಟಿಒ ಕಚೇರಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿನ ಸೇವೆ ಜನತೆಗೆ ಸಮರ್ಪವಾಗಿ ಸಿಗಬೇಕು. ಒಂದು ವೇಳೆ ಕುಂದುಕೊರತೆ ಕಂಡುಬಂದಲ್ಲಿ ಅದನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ತಾವು ಈಗಾಗಲೇ ಜಿಲ್ಲೆಯ ಅಲ್ಲಲ್ಲಿ ದೂರು ಪೆಟ್ಟಿಗೆ ಸ್ಥಾಪಿಸಿದ್ದು, ಆರ್ ಟಿಒ ಕಚೇರಿ ಬಗ್ಗೆ ಕೂಡ ಹೆಚ್ಚಿನ ದೂರುಗಳು ಬಂದಿವೆ. ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ತಾವು ದಿಢೀರ್ ಭೇಟಿ ನೀಡಿರುವುದಾಗಿ ತಿಳಿಸಿದರು.
ಎಚ್ಚರಿಕೆ: ಆರ್‌ಟಿಒ ಕಚೇರಿ ಎಂದರೆ ಬ್ರೋಕರ್ ಮಾಫಿಯಾ ಅನ್ನುವಂತ ಕೆಟ್ಟ ಹೆಸರಿದೆ. ಇದು ಹೋಗಬೇಕು. ಇನ್ನುಮುಂದೆ ಈ ಕಚೇರಿಯಲ್ಲಿ ಬ್ರೋಕರ್ ಗಳು ಕಂಡುಬಂದಲ್ಲಿ ನಾನೇ ಖುದ್ದು ಕಚೇರಿಯನ್ನು ಬಂದ್ ಮಾಡಿಸುತ್ತೇನೆ ಎಂದು ಸಚಿವರು, ಆರ್‌ಟಿಒ ಕಚೇರಿಯಿಂದ ನಿರ್ಗಮಿಸುವ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. ಸರಿಯಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಬೋರ್ಡ್ ಹಾಕಿಸಿ: ಕಚೇರಿ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರ್‌ಟಿಒ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಕಳುಹಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ಆರ್‌ಟಿಒ ಕಚೇರಿಯಲ್ಲಿ ಮಧ್ಯಸ್ಥಿಕೆದಾರರಿಗೆ ಅವಕಾಶವಿಲ್ಲ ಎನ್ನುವ ಬೋರ್ಡ್ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದರು.