Bidar: ಶೂಟೌಟ್: ಸಿಬಂದಿ ಹತ್ಯೆಗೈದು 93 ಲಕ್ಷ ರೂ.ಎಟಿಎಂ ಹಣದ ಪೆಟ್ಟಿಗೆ ಲೂಟಿ!
ಬೀದರ್ನ ನಡುಪೇಟೆಯಲ್ಲಿ ಹಾಡಹಗಲೇ ದರೋಡೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕ
Team Udayavani, Jan 16, 2025, 12:27 PM IST
ಬೀದರ್: ನಗರದ ಎಸ್ಬಿಐ ಬ್ಯಾಂಕ್ನಲ್ಲಿ ಹಣ ಪಡೆದು ಎಟಿಎಂಗೆ ತುಂಬಲು ತೆರಳುತ್ತಿದ್ದ ಸಿಎಂಎಸ್ ಕಂಪೆನಿಯ ಸಿಬಂದಿ ಮೇಲೆ ಗುರುವಾರ ಹಾಡಹಗಲೇ ಗುಂಡಿನ ದಾಳಿ ನಡೆಸಿ, 93 ಲಕ್ಷ ರೂ.ಗಳಿದ್ದ ಹಣದ ಪೆಟ್ಟಿಗೆ ದೋಚಿದ್ದ ಇಬ್ಬರು ದರೋಡೆಕೋರರು ತೆಲಂಗಾಣದ ಹೈದರಾಬಾದ್ನಲ್ಲೂ ಖಾಸಗಿ ಟ್ರಾವೆಲ್ಸ್ ಸಿಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಹೊಂದಿಕೊಂಡಿರುವ ಎಸ್ಬಿಐ ಬ್ಯಾಂಕ್ನ ಮುಖ್ಯ ಶಾಖೆ ಎದುರು ಜನನಿಬಿಡ ಸ್ಥಳದಲ್ಲೇ ಸಿಎಂಎಸ್ ಸಿಬಂದಿ ಮೇಲೆ ದುಷ್ಕರ್ಮಿಗಳು ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿ ಸಿನಿಮೀಯ ರೀತಿಯಲ್ಲಿ ಹಣ ದರೋಡೆ ಮಾಡಿ ಹೈದರಾಬಾದ್ಗೆ ಪರಾರಿಯಾಗಿದ್ದರು.
ಹೈದರಾಬಾದ್ನಲ್ಲಿ ದರೋಡೆಕೋರರು ಛತ್ತೀಸ್ಗಢದ ರಾಯಪುರ್ಗೆ ತೆರಳಲು ಅಮಿತ್ ಕುಮಾರ್ ಹೆಸರಲ್ಲಿ ಖಾಸಗಿ ಟ್ರಾವೆಲ್ಸ್ನ ಬಸ್ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಅಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಅದೇ ಬಸ್ನಲ್ಲಿ ಪ್ರಯಾಣಿಸಬೇಕಿದ್ದ ಬೀದರ್ ಪೊಲೀಸರನ್ನು ಕಂಡೊಡನೆ ಈ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಹೈದರಾಬಾದ್ನ ಅಫ್ಜಲ್ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗುಂಡು ಬಸ್ ಸಿಬಂದಿ ಜಹಾಂಗೀರ್ ಎಂಬವರಿಗೆ ತಗುಲಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ದರೋಡೆ ಮಾಡಿದ್ದ ಹಣದ ಸಮೇತ ಬಸ್ನಲ್ಲಿ ಆರೋಪಿಗಳು ಕುಳಿತಿದ್ದ ವೇಳೆ ಖಾಸಗಿ ಟ್ರಾವೆಲ್ಸ್ನ ಸಿಬಂದಿ ಬ್ಯಾಗ್ ಚೆಕ್ ಮಾಡುವ ಸಂದರ್ಭ ಅನುಮಾನಗೊಂಡಾಗ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಇಬ್ಬರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಗುಂಡೇಟಿನಿಂದ ಸಿಬಂದಿ ಸಾವು
ಬೀದರ್ನಲ್ಲಿ ದರೋಡೆಕೋರರ ಗುಂಡೇಟಿನಿಂದ ನಗರದ ಚಿದ್ರಿಯ ನಿವಾಸಿ ಗಿರಿ ವೆಂಕಟ (42) ಎಂಬವರು ಸಾವನ್ನಪ್ಪಿದ್ದರೆ, ಲಾಡಗೇರಿಯ ಶಿವಕುಮಾರ ಗುನ್ನಳ್ಳಿ ಎಂಬವರು ಗಂಭೀರವಾಗಿ ಗಾಯಗೊಂಡು ಹೈದರಾಬಾದ್ನ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಬ್ಬರೂ “ಕ್ಯಾಶ್ ಮ್ಯಾನೇಜಮೆಂಟ್ ಸರ್ವೀಸ್’ (ಸಿಎಂಎಸ್)ನ ಕ್ಯಾಶ್ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಘಟನೆ ವಿವರ
ಗುರುವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಎಸ್ಬಿಐ ಮುಖ್ಯ ಶಾಖೆಯ ಹೊರಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನದಲ್ಲಿ ಎಂದಿನಂತೆ ಬ್ಯಾಂಕ್ನಿಂದ ಪಡೆದ ಹಣದ ಪೆಟ್ಟಿಗೆ ಇಡಲು ಗಿರೀಶ್ ಮತ್ತು ಶಿವಕುಮಾರ ಬಂದಿದ್ದರು. ಈ ವೇಳೆ ಮುಖಕ್ಕೆ ಬಟ್ಟೆ ಮತ್ತು ಹೆಲ್ಮೆಟ್ ಧರಿಸಿದ್ದ ಆರೋಪಿಗಳು ಬೈಕ್ ಮೇಲೆ ದರೋಡೆಗಾಗಿ ಕಾದು ಕುಳಿತಿದ್ದರು. ವಾಹನದ ಬಳಿ ಹಣದ ಪೆಟ್ಟಿಗೆ ತರುತ್ತಿದ್ದಂತೆ ಕಸಿದುಕೊಳ್ಳಲು ಪ್ರಯತ್ನಿಸಿದರು. ಹಣ ಕೊಡದಿದ್ದಾಗ ಖಾರದ ಪುಡಿ ಎರಚಿ, ಬಳಿಕ ಗುಂಡಿನ ದಾಳಿ ನಡೆಸಿ ಹಣದ ಪೆಟ್ಟಿಗೆ ಸಮೇತ ಪರಾರಿಯಾದರು. ಗುಂಡೇಟಿನಿಂದ ಇಬ್ಬರು ಸಿಬಂದಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದರು.
ದುಷ್ಕರ್ಮಿಗಳು ಒಟ್ಟು ಏಳು ಸುತ್ತು ಗುಂಡು ಹಾರಿಸಿದ್ದಾರೆ. ಗಿರೀಶ್ ಮೇಲೆ ಐದು ಗುಂಡು ಹಾರಿಸಿದ್ದು, ಅದರಲ್ಲಿ ಎರಡು ಮೊಣಕಾಲು, ಎದೆ ಮತ್ತು ತಲೆಗೆ ತಗುಲಿದ್ದರೆ, ಒಂದು ವಿಫಲವಾಗಿದೆ. ಶಿವಕುಮಾರ ಅವರ ಎದೆಗೆ ಒಂದು ಗುಂಡು ತಗುಲಿದ್ದು, ಇನ್ನೊಂದನ್ನು ರಸ್ತೆಯಲ್ಲಿದ್ದ ಜನರಲ್ಲಿ ಭಯ ಹುಟ್ಟಿಸಲು ಗಾಳಿಯಲ್ಲಿ ಹಾರಿಸಲಾಗಿದೆ. ಈ ವೇಳೆ ಬೈಕ್ ಮೇಲಿಟ್ಟುಕೊಳ್ಳುವಾಗ ಹಣದ ಪೆಟ್ಟಿಗೆ ಕೆಳಗೆ ಬಿದ್ದಿತ್ತು. ಆದರೂ ಅದನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲಿಟ್ಟುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಕೈಯಲ್ಲಿ ಗನ್ ಇದ್ದ ಕಾರಣ ರಸ್ತೆ ಮೇಲೆ ಓಡಾಡುತ್ತಿದ್ದ ಯಾರೊಬ್ಬರೂ ಅವರನ್ನು ಹಿಡಿಯಲು ಮುಂದಾಗಲಿಲ್ಲ. ದೂರದಲ್ಲಿದ್ದ ಒಂದಿಬ್ಬರು ಯುವಕರು ಕಲ್ಲಿನಿಂದ ಹೊಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗುಂಡೇಟು, ದರೋಡೆ ಎಲ್ಲ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿವೆ. ಗುಂಡಿನ ದಾಳಿ ವೇಳೆ ವಾಹನದ ಡ್ರೈವರ್ ರಾಜಶೇಖರ ಹಳ್ಳದಕೇರಿ ಬ್ಯಾಂಕ್ನ ಒಳಗಿದ್ದರೆ, ಗನ್ಮ್ಯಾನ್ ಇನ್ನೂ ಬಂದಿರಲಿಲ್ಲ.
ಕೃತ್ಯಕ್ಕೆ ದುಷ್ಕರ್ಮಿಗಳು ಮಹಾರಾಷ್ಟ್ರ ನೋಂದಣಿಯ ಬೈಕ್ ಬಳಸಿದ್ದು, ಡಿಸಿ ಕಚೇರಿ, ಹರಳಯ್ಯ ವೃತ್ತದ ಮಾರ್ಗವಾಗಿ ಜನವಾಡಾದ ಕಡೆಗೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ಮತ್ತು ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಲಬುರಗಿ ಡಿಐಜಿ ಅಜಯ್ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ
ಭದ್ರತಾ ಸಿಬಂದಿ ಗೈರು; ಸಂಶಯ
ಹಣ ಪೆಟ್ಟಿಗೆ ದರೋಡೆ ಘಟನೆ ವೇಳೆ ವಾಹನದ ಭದ್ರತ ಸಿಬಂದಿ ಇಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ. ಇಬ್ಬರು ಕ್ಯಾಶ್ ಕಸ್ಟೋಡಿಯನ್ಗಳು ಬ್ಯಾಂಕ್ನಿಂದ ಹಣ ಪಡೆದು ಏಜೆನ್ಸಿ ವಾಹನದಲ್ಲಿಡುವಾಗ ಭದ್ರತೆ ಬಹಳ ಮುಖ್ಯ. ಆದರೆ ಸೆಕ್ಯೂರಿಟಿ ಸಿಬಂದಿ ಇರಲೇ ಇಲ್ಲ. ಅವರು ಸ್ವಲ್ಪ ತಡವಾಗಿ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ. ಪ್ರತೀ ಬಾರಿ ಏಜೆನ್ಸಿ ವಾಹನವನ್ನು ಬ್ಯಾಂಕ್ನ ಒಳಗಡೆ ಒಯ್ದು ಹಣದ ಪೆಟ್ಟಿಗೆಯನ್ನು ಇಡಲಾಗುತ್ತಿತ್ತು. ಗುರುವಾರ ಮಾತ್ರ ರಸ್ತೆ ಮೇಲೆ ವಾಹನ ನಿಲ್ಲಿಸಿ, ಹಣದ ಪೆಟ್ಟಿಗೆ ಇಡಲಾಗುತ್ತಿತ್ತು ಎನ್ನಲಾಗುತ್ತಿದೆ. ಇದೊಂದು ದುಷ್ಕರ್ಮಿಗಳ ಪೂರ್ವಯೋಜಿತ ಕೃತ್ಯವಾಗಿದೆ. “ಅನುಭವಿ’ ಅಪರಾ ಧಿಗಳೇ ಭಾಗಿಯಾಗಿರುವ ಸಾಧ್ಯತೆಗಳಿವೆ. ಜಿಲ್ಲಾ ಪೊಲೀಸರು ಈ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಿದ್ದಾರೆ.
ಕುಟುಂಬಕ್ಕೆ ಬರಸಿಡಿಲು
ಈ ಘಟನೆಯಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತಪಟ್ಟಿರುವ ಗಿರಿ ವೆಂಕಟ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದರು. ಅವರ ಸಾವು ಕುಟುಂಬದ ಸದಸ್ಯರಿಗೆ ಬರಸಿಡಿಲು ಬಡಿದಂತಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಾಣಾಪಾಯದಿಂದ ಪಾರು
ಗಂಭೀರವಾಗಿ ಗಾಯಗೊಂಡಿರುವ ಶಿವಕುಮಾರ ಗುನ್ನಳ್ಳಿ ಹೈದರಾಬಾದ್ನ “ಹೈಟೆಕ್ ಸಿಟಿ’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಆಘಾತ ತಂದಿದೆ. ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾ ಎಸ್ಪಿಗೆ ಸೂಚಿಸಿದ್ದೇನೆ. ಗೃಹ ಸಚಿವ ಡಾ| ಪರಮೇಶ್ವರ ಜತೆಗೂ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಹಾಗೂ ಶಾಂತಿ-ಸುವ್ಯವಸ್ಥೆಗೆ ಭಂಗ ಬಾರದಂತೆ ಕ್ರವವಹಿಸಲು ಸೂಚಿಸಲಾಗಿದೆ.
-ಈಶ್ವರ ಖಂಡ್ರೆ, ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಧಾರ್ಮಿಕ ಆಚರಣೆ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇಲ್ಲ: ಎಚ್.ಡಿ.ಕುಮಾರಸ್ವಾಮಿ
Fraud Case: ಬೆಂಗಳೂರಲ್ಲಿ 3,200 ಕೋ.ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ
Stampede: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ: ರಾಜ್ಯದಿಂದ ಅಧಿಕಾರಿಗಳ ತಂಡ ರವಾನೆ
ಯೋಗೀಶಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
Protest: “ಅಂಗನವಾಡಿ’ ಧರಣಿ ಮುಂದುವರಿಕೆ