ಹುಮನಾಬಾದ: ಬೀದರ್ ಜಿಲ್ಲೆಯಲ್ಲಿ ಈವರೆಗೂ ಭೂಕಂಪ ಸಂಭವಿಸಿಲ್ಲ ಮುಂದೆ ಕೂಡ ಸಂಭವಿಸುವುದು ಬಹುತೇಕ ಅನುಮಾನ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವಿಜ್ಞಾನಿ ಡಾ। ರಮೇಶ್ ಎಲ್ ದಿಕ್ಪಾಲ್ ಹೇಳಿದರು.
ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭೂಮಿಯಲ್ಲಿ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಮಾತನಾಡಿದು.
ಹುಣಸನಾಳ ಗ್ರಾಮದಲ್ಲಿ ಕೇಳಿ ಬಂದ ಶಬ್ದಗಳು ಭೂಕಂಪಕ್ಕೆ ಸಂಬಂಧಪಟ್ಟಿಲ್ಲ. ಅತಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಇಂತಹ ಶಬ್ದಗಳು ಕೇಳಿಬರುವುದು ಸಾಮಾನ್ಯ ಆದರೆ, ಅದು ಭೂಕಂಪ ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಎರಡು ತರಹದ ಕಲ್ಲುಗಳಿಂದ ಕೂಡಿದ ಭೂಮಿ ಇದಾಗಿದೆ. ಎಲ್ಲಿ ಭೂಕಂಪ ಸಂಭವಿಸುವುದಿಲ್ಲ.
ಹಿಂದೆ ನೆರೆ ಮಹಾರಾಷ್ಟ್ರದಲ್ಲಿ ಭೂಕಂಪ ಸಂಭವಿಸಿ ಅನೇಕ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿ ಕೂಡ ಬೀದರ್ ಜಿಲ್ಲೆಯಲ್ಲಿ ಭೂಕಂಪನದ ಅನುಭವ ಆಗಿಲ್ಲ. ರಾಜ್ಯದ 14 ಕಡೆಗಳಲ್ಲಿ ಭೂಕಂಪನ ಯಂತ್ರಗಳು ಅಳವಡಿಸಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಭೂಕಂಪ ಸಂಭವಿಸಿದ ಕ್ಷಣದಲ್ಲಿ ಮಾಹಿತಿ ಲಭ್ಯವಾಗುತ್ತದೆ. ಗ್ರಾಮದಲ್ಲಿನ ಮಾಹಿತಿ ಲಭ್ಯವಾದ ನಂತರ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಯಾವುದೆ ಭೂಕಂಪದ ವರದಿಗಳು ಕಂಡು ಬಂದಿಲ್ಲ. ಗ್ರಾಮಸ್ಥರು ಯಾವುದೆ ಕಾರಣಕ್ಕೂ ಆತಂಕ ಪಡಬಾರದು. ನೆಮ್ಮದಿಯಿಂದ ಜೀವನ ನಡೆಸಬೇಕು. ಆ ಶಬ್ದಗಳಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಓಬಣ್ಣ ನಾಯಕರ ಸಮಾಧಿ ನಾಶ: ಕ್ರಮಕ್ಕೆ ಆಗ್ರಹ
ಈ ಕುರಿತು ಗ್ರಾಮದ ಜನರು ಅನೇಕ ಪ್ರಶ್ನೆಗಳು ಕೇಳುವ ಮೂಲಕ ವಿಜ್ಞಾನಿಗಳಿಂದ ಉತ್ತರ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು. ಯಾವುದೇ ಸಮಸ್ಯೆ ಕಂಡುಬಂದರೆ ಹೆಚ್ಚಿನ ಪರಿಶೀಲನೆಗೆ ಅಧಿಕಾರಗಳ ತಂಡ ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ ನಾಗಯ್ಯ ಹಿರೇಮಠ, ಪಶುಸಂಗೋಪನೆ ಸಹಾಯಕ ನಿದೇಶಕ ಡಾ। ಗೋವಿಂದ, ಜಿಲ್ಲಾ ವಿಪ್ಪತ್ತು ನಿರ್ವಾಹಣಾಧಿಕಾರಿ ಸಂದೀಪ ಪಾಟೀಲ್, ಗ್ರಾಮ ಪಂಚಾಯತ ಅಧ್ಯಕ್ಷ ದತ್ತು ಕಾಳೆ, ಬಿಜೆಪಿ ಮುಖಂಡ ಅಭಿಮನ್ಯು ನಿರಗುಂಡೆ, ಜ್ಞಾನೇಶ್ವರ ಭೋಸ್ಲೆ, ರಂಜಿತ ಮಾನಕರೆ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.