ಬೀದರ: ಕಾರಾಗೃಹಗಳಲ್ಲಿ ಬಂದಿಗಳ ದಟ್ಟಣೆ ಕಡಿಮೆ ಮಾಡಲು ಬೀದರ ಜಿಲ್ಲೆಯಲ್ಲಿ 1000 ಬಂದಿಗಳ ಸಾಮರ್ಥ್ಯವುಳ್ಳ ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹವನ್ನು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಜಿಲ್ಲಾ ಕಾರಾಗೃಹವನ್ನು 116 ಬಂದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಿಸಲಾಗಿದ್ದು, ಪ್ರಸ್ತುತ ಸರಾಸರಿ 200ಕ್ಕಿಂತಲೂ ಅಧಿಕ ವಿಚಾರಣಾ ಬಂದಿಗಳು ದಾಖಲಾಗುತ್ತಿರುವುದರಿಂದ ಸ್ಥಳಾವಕಾಶ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾ ಬಂದಿಗಳು ಶಿಕ್ಷೆಗೆ ಒಳಗಾದಲ್ಲಿ ಗುಲ್ಬರ್ಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸ ಲಾಗುತ್ತಿದ್ದು, ಅಲ್ಲಿಯೂ ಬಂದಿಗಳ ಸಂಖ್ಯೆ ಅಧಿಕೃತ ಸಾಮರ್ಥ್ಯಕ್ಕಿಂತ ಹೆಚ್ಚಾಗುತ್ತಿರುವುದರಿಂದ ಸ್ಥಳಾವಕಾಶದ ಕೊರತೆ ಇದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಾರಾಗೃಹಗಳ ಬಂದಿಗಳ ಕಟ್ಟಣೆ ಕಡಿಮೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯಲ್ಲಿ 1000 ಸಂಖ್ಯೆಯ ಬಂದಿಗಳ ಸ್ಥಳಾವಕಾಶವಿರುವ ಕೇಂದ್ರ ಕಾರಾಗೃಹವನ್ನು ನಿರ್ಮಿಸಲು ಯೋಜಿಸಲಾಗಿದೆ.
ಜಿಲ್ಲಾ ಕಾರಾಗೃಹವು ನಗರ ಮಧ್ಯ ಭಾಗದಲ್ಲಿದ್ದು, ಅದಕ್ಕೆ ಹೊಂದಿಕೊಂಡಂತೆ ಖಾಸಗಿ ಕಟ್ಟಡಗಳು ನಿರ್ಮಾಣ ಆಗಿರುವುದರಿಂದ ಕಾರಾಗೃಹದ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುವುದನ್ನು ಮತ್ತು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ ಸ್ಥಳಾವಕಾಶದ ಕೊರತೆಯ ಅಂಶವನ್ನು ಪರಿಗಣಿಸಿ, ನಗರದ ಹೊರವಲಯದ ಕೋಳಾರ(ಬಿ) ಗ್ರಾಮದ ಸರ್ವೇ ನಂ.23ರಲ್ಲಿ ಮಂಜೂರಾಗಿರುವ 49 ಎಕರೆ ಜಮೀನಿನಲ್ಲಿ ನೂತನ ವಿಶಿಷ್ಟ ಕೇಂದ್ರ ಕಾರಾಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಶಿಷ್ಟ ಕೇಂದ್ರ ಕಾರಾಗೃಹವನ್ನು ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ 9995.42ಲಕ್ಷಗಳ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಕಾರಾಗೃಹಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಸಿಎಂ ಯಡಿಯೂರಪ್ಪ ಮತ್ತು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಚವ್ಹಾಣ ಧನ್ಯವಾದ ಅರ್ಪಿಸಿದ್ದಾರೆ.