Advertisement

ಜಿಲ್ಲೆಯಲ್ಲಿ 14ರಂದು ಮೆಗಾ ಲೋಕ ಅದಾಲತ್‌

06:15 PM Aug 12, 2021 | Team Udayavani |

ಬೀದರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆ. 14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದ್ದು, ಅದಾಲತ್‌ನಲ್ಲಿ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗುವುದು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಿಯಾಗಬಹುದಾದ ಕ್ರಿಮಿನಲ್‌ ಪ್ರಕರಣ, ಚೆಕ್‌ ಬೌನ್ಸ್‌ ಪ್ರಕರಣ, ಬ್ಯಾಂಕ್‌ ವಸೂಲಾತಿ ಪ್ರಕರಣ, ಕಾರ್ಮಿಕ ವಿವಾದ ಪ್ರಕರಣ, ಎಂವಿಸಿ ಪ್ರಕರಣ, ವಿದ್ಯುತ್‌ ಮತ್ತು ನೀರಿನ ಶುಲ್ಕಗಳ ಪ್ರಕರಣ, ವೈವಾಹಿಕ ವಿವಾದಗಳು-ಜೀವನಾಂಶದ ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ವ್ಯಾಜ್ಯವನ್ನು ಕಡಿಮೆ ಖರ್ಚಿನಲ್ಲಿ, ಶೀಘ್ರ ಹಾಗೂ ಅಂತಿಮವಾಗಿ ಇತ್ಯರ್ಥಪಡಿಸಿಕೊಳ್ಳುವುದು ಲೋಕ ಅದಾಲತ್‌ನ ವೈಶಿಷ್ಟವಾಗಿದೆ. ಯಾವುದೇ ಕೋರ್ಟ್‌ ಶುಲ್ಕ ಕೊಡಬೇಕಾಗಿಲ್ಲ. ಪಕ್ಷಗಾರರು ನೇರವಾಗಿ ಅಥವಾ ವಕೀಲರ ಮುಖಾಂತರ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಸಿವಿಲ್‌ ಪ್ರಕರಣ ಇತ್ಯರ್ಥಗೊಂಡರೆ ಅವಾರ್ಡ್‌ ಮಾಡಲಾಗುವುದು ಅದು ಸಾಮನ್ಯ ಡಿಕ್ರಿಯಷ್ಟೇ ಮಹತ್ವ ಪಡೆದುಕೊಂಡಿರಲಿದ್ದು, ಪ್ರಕರಣ ರಾಜಿಯಾದಲ್ಲಿ ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು ಎಂದು ಹೇಳಿದರು.

ಆ. 7ರಿಂದ 16ರವರೆಗೆ ವೀಕೆಂಡ್‌ ಕರ್ಫ್ಯೂ ಜಾರಿ ಹಿನ್ನೆಲೆ ಅದಾಲತ್‌ನಲ್ಲಿ ಪಾಲ್ಗೊಳ್ಳಲು ನ್ಯಾಯಾಲಯಗಳಿಗೆ ಆಗಮಿಸುವ ಕಕ್ಷಿದಾರರು ಮತ್ತು ವಕೀಲ ಬಾಂಧವರಿಗೆ ಅನುಕೂಲ ಮಾಡಿಕೊಡಲು ಈಗಾಗಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರು ಭರವಸೆ ನೀಡಿದ್ದಾರೆ. ಹಾಗಾಗಿ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಿಗೆ ಆಗಮಿಸುವುದಕ್ಕೆ ಕಕ್ಷಿದಾರರಿಗೆ ಅಥವಾ ವಕೀಲರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಮುಂಬರುವ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಗೂ ಖುದ್ದಾಗಿ ಹಾಜರಾಗುವ ಮೂಲಕ ಭಾಗವಹಿಸ ಬಹುದಾಗಿರುತ್ತದೆ. ಒಂದು ವೇಳೆ ಆ. 14ರಂದು ಯಾವುದಾದರೂ ಕಕ್ಷಿದಾರರು ಅದಾಲತ್‌ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಮತ್ತು ಅವರು ತಮ್ಮ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಬಯಸಿದ್ದರೆ ಅಂಥ ಪ್ರಕರಣವನ್ನು ಆ. 16ರಂದು ಮಧ್ಯಾಹ್ನ 3ರ ನಂತರ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅದಾಲತ್‌ ಮುಂದುವರಿಸಲಾಗುವುದು ಎಂದು ತಿಳಿಸಿದರು.

Advertisement

ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಲೆವಾರಿ ಮಾಡಲು ಎಲ್ಲ ನ್ಯಾಯಾಲಯಗಳಲ್ಲಿ ಪ್ರಿ- ಕೌನ್ಸಿಲೇಶನ್‌ ಸಿಟಿಂಗ್‌ ಅನ್ನು ಫಿಜಿಕಲಿ ಮತ್ತು ವರ್ಚುವಲಿ ಮುಖಾಂತರ ಏರ್ಪಡಿಸಲಾಗಿದೆ. ಅದ್ದರಿಂದ ಪಕ್ಷಗಾರರು, ವಕೀಲರು ತಮ್ಮ ಪ್ರಕರಣಗಳನ್ನು ಪ್ರಿ ಕೌನ್ಸಿಲೇಶನ್‌ ಸಿಟಿಂಗ್‌ಗಾಗಿ ಕಳುಹಿಸಿಕೊಡಬಹುದು. ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಮತ್ತು ವಕೀಲರು ಭಾಗವಹಿಸಿ ತಮ್ಮ ಪ್ರಕರಣ ರಾಜಿ ಸಂಧಾನದ ಮೂಲಕ ಬಗೆಹರಿಸಿ ಮೆಗಾ ಲೋಕ ಅದಾಲತ್‌ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಾನೂರೆ ಅಶೋಕ ಇದ್ದರು.

ಬೀದರ ಜಿಲ್ಲೆಯಾದ್ಯಂತ ಈಗಾಗಲೇ 8,876 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 3,067 ಪ್ರಕರಣಗಳಲ್ಲಿ ಕಕ್ಷಿದಾರರು ಲೋಕ ಅದಾಲತ್‌ ಮೂಲಕ ರಾಜಿ ಸಂಧಾನ ಮಾಡಿಕೊಂಡಿದ್ದಾರೆ.
ಜಿ.ಎ. ಮಂಜುನಾಥ, ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next