Advertisement

ನಿರುದ್ಯೋಗ-ನೀರಾವರಿ ಚರ್ಚೆಯೇ ಇಲ್ಲ

11:27 AM Apr 15, 2019 | Naveen |

ಬೀದರ: ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡುತ್ತಿರುವ ಬೀದರ್‌ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Advertisement

ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ನಡೆಸಿದ ಮಾಜಿ
ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರಿಗೆ 57,109 ಮತ ಹಾಗೂ
ಬಿಜೆಪಿಯ ಭಗವಂತ ಖೂಬಾ ಅವರಿಗೆ 44,225 ಮತಗಳು
ದೊರಕಿದ್ದವು. ಸದ್ಯ ರಹೀಂಖಾನ್‌ ಇಲ್ಲಿನ ಶಾಸಕರಾಗಿದ್ದು, ಮೈತ್ರಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ನಾಗಮಾರಪಳ್ಳಿ ಕುಟುಂಬ ಪ್ರಾಬಲ್ಯ ಹೊಂದಿದೆ. ಕಳೆದ ವಿಧಾನ
ಸಭೆ ಚುನಾವಣೆಯಲ್ಲಿ ರಹೀಮ್‌ ಖಾನ್‌ 73,270 ಮತಗಳನ್ನು ಪಡೆದುಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಳ್ಳಿ 63,025 ಮತಗಳನ್ನು ಪಡೆದು 10,245 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಏನಂತಾರೆ ಜನರು?: ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಲೋಕಸಭೆ ಚುನಾವಣೆಯ ಚರ್ಚೆಗಳು ಜೋರಾಗಿದೆ. ಗ್ರಾಮೀಣ ಭಾಗದ ಜನರು ಕೂಡ ಯಾರಿಗೆ ಮತ ಹಾಕಿದರೆ ಹೇಗೆ ಎಂದು ಪರಸ್ಪರ ಮಾತನಾಡಿಕೊಳ್ಳುತಿದ್ದಾರೆ.ಯಾವ ಪಕ್ಷದ ಸಾಧನೆ ಏನು?, ಅಭ್ಯರ್ಥಿಗಳ ಪೂರ್ವಾಪರ ಬಗ್ಗೆಯೂ ಚರ್ಚೆಗಳು ಶುರುವಾಗಿವೆ.
ಇದೀಗ ನಡೆಯುವ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸೂಕ್ತ ಎಂದು ಗ್ರಾಮೀಣ ಭಾಗದ ಜನರು ಕಟ್ಟೆ ಮೇಲೆ ಕುಳಿತು ಚರ್ಚೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಪರಸ್ಪರ
ಬೈದಾಡಿಕೊಳ್ಳುವುದು, ವಾದ-ವಾಗ್ವಾದ ಸಹಜವಾಗಿವೆ.

ಇತ್ತೀಚೆಗೆ ನಡೆದ ಸರ್ಜಿಕಲ್‌ ಸ್ಟ್ರೈಕ್ ನಂತರ ಯುವಕರು ದೇಶ ಪ್ರೇಮದ ಭಾವನೆಗೆ ಒಳಗಾಗಿದ್ದಾರೆ. ಹಾಗಂತ ಎದುರಾಳಿ ಪಕ್ಷದವರು ಕೂಡ ಅನೇಕ ಕಡೆಗಳಲ್ಲಿ ಭಾಷಣ ಮಾಡಿ, ಭಾರತ-ಪಾಕಿಸ್ತಾನದ ಯುದ್ಧ ನಡೆದಾಗ ಯಾವ ಸರ್ಕಾರ ಇತ್ತು ಎಂದು ಕೂಡ ಪ್ರಶ್ನಿಸುತ್ತಿದ್ದಾರೆ.

ಸೈನಿಕರ ಹೆಸರಲ್ಲಿ ರಾಜಕೀಯ ಸಲ್ಲ ಎಂದು ಕಾಂಗ್ರೆಸ್‌ ಪಕ್ಷದವರು ಹೇಳುತ್ತಿದ್ದರೆ, ದೇಶದ ಸುರಕ್ಷತೆಗೆ ಬಿಜೆಪಿಗೆ ಹಾಗೂ ಮೋದಿಗೆ ಬೆಂಬಲಿಸಿ ಎಂದು ಬಿಜೆಪಿಯವರು ಹೇಳುತ್ತಿರುವುದು ಸಾಮಾನ್ಯವಾಗಿದೆ.

Advertisement

ಕ್ಷೇತ್ರದ ಸಮಸ್ಯೆ: ಸದ್ಯ ಬೀದರ್‌ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದಾರೆ. ಪ್ರಮಖವಾಗಿ ಬೀದರ್‌ ನಗರದಲ್ಲಿ ಬೇಸಿಗೆ ಅವ ಧಿಯಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಪದೇಪದೆ ಬೀದರ್‌ ತಾಲೂಕು ಬರಪೀಡಿತ ಪ್ರದೇಶವೆಂದು ಗುರುತಿಸಿಕೊಳ್ಳುತ್ತಿದೆ. ಯುಜಿಡಿ ಕಾಮಗಾರಿ ಹೆಸರಲ್ಲಿ ಅನೇಕ ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆದು ಹಾಳುಮಾಡಿರುವುದು ಜನರ ಆಕ್ರೋಷಕ್ಕೆ ಕಾರಣವಾಗಿದೆ. ಹೆಚ್ಚು ಯುವಕರು ನೀರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಾವರಿ ಯೋಜನೆಗಳು ಇಲ್ಲದೆ ರೈತರು ಕಂಗಾಲು ಆಗಿದ್ದರೂ ಚುನಾವಣೆಯಲ್ಲಿ ಈ ಎಲ್ಲಾ ವಿಷಯಗಳು ಚರ್ಚೆಗೆ ಬರದಿರುವುದು ವಿಪರ್ಯಾಸ ಎನ್ನುತ್ತಾರೆ ಪ್ರಜ್ಞಾವಂತ ಮತದಾರರು.

ನಾಯಕರ ಭೇಟಿ: ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ, ಎಚ್‌.ಕೆ ಪಾಟೀಲ, ಸಚಿವ ಶಿವಾನಂದ ಪಾಟೀಲ, ಸಚಿವ ರಾಜಶೇಖರ ಪಾಟೀಲ, ರಹೀಂ ಖಾನ್‌ ಭಾಗವಹಿಸಿ ಈಶ್ವರ ಖಂಡ್ರೆ ಪರ ಮತಯಾಚನೆ ಮಾಡಿದ್ದಾರೆ.

ಅದೇ ರೀತಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ ಸೇರಿದಂತೆ ಕ್ಷೇತ್ರದ ಮುಖಂಡರು ಇದ್ದರು. ನಂತರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬೀದರ್‌, ದುಬಲಗುಂಡಿ, ಗಾದಗಿ ಗ್ರಾಮಗಳಿಗೆ ಭೇಟಿ ನೀಡಿ
ಪ್ರಚಾರ ಮಾಡಿದ್ದಾರೆ.

ಜನರ ಒಲವು
ಮೇಲ್ವರ್ಗದ ಸಮುದಾಯಗಳು ಮೋದಿ ಪರ ಒಲವು ಹೊಂದಿರುವುದು ಮೇಲ್ನೋಟಕ್ಕೆ ಕಾಣುತ್ತಿವೆ. ಕಳೆದ ಐದು
ವರ್ಷಗಳ ಆಡಳಿತ ಉತ್ತಮವಾಗಿತ್ತು ಎಂಬುದು ಬಿಜೆಪಿ ಮುಖಂಡರ ಅಭಿಮತ. ಆದರೆ, ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಗಳು ಕಾಂಗ್ರೆಸ್‌ ಪರ ಒಲವು ಹೊಂದಿದ್ದು, ಸಂವಿಧಾನ ಬದಲಾವಣೆ ವಿಷಯದ ಬಗ್ಗೆಯೂ ಭಾರೀ ಚರ್ಚೆಗಳು
ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next