ಬೀದರ್: ಮೀಸಲಾತಿ ರದ್ದುಪಡಿಸುವ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸುವ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಲಿ. ಆ ಮೂಲಕ ತಾವು ಗಾಂಧಿ ಕುಟುಂಬದ ʼವಾಚ್ ಮ್ಯಾನ್ʼ ಅಲ್ಲ ಎಂಬುದನ್ನು ಸಾಬೀತು ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ನಗರದಲ್ಲಿ ರವಿವಾರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೀಸಲಾತಿಯ ಸೌಲಭ್ಯದಲ್ಲಿ ಅಧಿಕಾರವನ್ನು ಅನುಭವಿಸುತ್ತ ಬಂದಿರುವ ಖರ್ಗೆ, ಈಗ ಎಐಸಿಸಿ ಅಧ್ಯಕ್ಷರೂ ಆಗಿದ್ದಾರೆ. ಒಂದು ಗಾಂಧಿ ಪರಿವಾರದ ಮರ್ಜಿಯಲ್ಲಿ ನೀವು ಇಲ್ಲ ಎನ್ನುವುದಾದರೇ, ರಾಹುಲ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಲಿ ಎಂದು ಆಗ್ರಹಿಸಿದರು.
ದೇಶದಲ್ಲಿ ಮೀಸಲಾತಿ ಸೌಲಭ್ಯ ತಂದದ್ದು ರಾಹುಲ್ ಅವರ ತಂದೆ ಅಥವಾ ಮುತ್ತಜ್ಜನಲ್ಲ. ನಮ್ಮ ತಂದೆ ಡಾ. ಅಂಬೇಡ್ಕರ ಅವರ ಹೋರಾಟದ ಪ್ರತಿಫಲದಿಂದ ಇದು ಸಿಕ್ಕಿರುವುದು. ದಲಿತ, ಹಿಂದುಳಿದವರ ವಿರೋಧಿ ಗಾಂಧಿ ಕುಟುಂಬದ ಮತ್ತು ಕಾಂಗ್ರೆಸ್‌ನ ಪರಂಪರೆಯಾಗಿದೆ. ಮೀಸಲಾತಿಯಿಂದ ದೇಶದ ಉದ್ಧಾರ ಆಗುವುದಿಲ್ಲ ಎಂದು ನೆಹರು ಹೇಳಿದ್ದರು. ಮುಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ರಾಜೀಲ್ ಗಾಂಧಿ ಸಹ ಇದನ್ನೇ ಮುಂದುವರೆಸಿಕೊಂಡು ಬಂದಿದ್ದರು. ಈಗ ರಾಹುಲ್ ಈ ರೀತಿ ಹೇಳುವುದರಲ್ಲಿ ಹೊಸದೇನು ಇಲ್ಲ ಎಂದರು.
ವಿದೇಶಗಳಲ್ಲಿ ಭಾರತಾಂಬೆಗೆ ಅಪಮಾನ ಮಾಡಿ ವಿಕೃತಿ ಮೆರೆಯುವ ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿಯಿದ್ದಂತೆ. ದೇಶದ ಬಗ್ಗೆ ರಾಹುಲ್ ಗೆ ಮಾತನಾಡುವುದೇ ಇದ್ದರೆ ಬನ್ನಿ ಕರ್ನಾಟಕಕ್ಕೆ ಎಂದ ನಾರಾಯಣಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾತುಗಳ ಮೂಲಕ ರಾಹುಲ್ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಆದರೆ, ಈಗ ಜನ ಬುದ್ಧಿವಂತರಾಗಿದ್ದಾರೆ. ನಿಮ್ಮ ಅಂಗಡಿಗೆ ಬೀಗ ಬಿದ್ದಿದೆ ಎಂದು ವ್ಯಂಗ್ಯವಾಡಿದರು. ಮೀಸಲಾತಿ ತೆಗೆಯುವುದಾಗಿ ಹೇಳುವ ರಾಹುಲ್‌ಗೆ ಭಾರತದಲ್ಲಿ ಇರಲು ಯಾವುದೇ ಯೋಗ್ಯತೆ ಇಲ್ಲ ಎಂದು ಛೇಡಿಸಿದರು.
ರಾಜ್ಯದ ಖಜಾನೆ ಖಾಲಿಯಾಗಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಮೀಸಲಾತಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಸರ್ಕಾರದ್ದು ಭೀಕ್ಷಕರಿಗಿಂತ ಕಡೆಯಾಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಾಗೆ ಇದ್ದಂತೆ, ಬಿಜೆಪಿ ಪಾರಿವಾಳ ಇದ್ದಂತೆ ಎಂದು ನಾರಾಯಣಸ್ವಾಮಿ ಹೇಳಿದರು.
ಮಕ್ಕಳ ಹಕ್ಕುಗಳ ಉಲ್ಲಂಘನೆ
ಮಾನವ ಸರಪಳಿ ಕಾಂಗ್ರೆಸ್ ಸರ್ಕಾರದ ಹಣ ನುಂಗುವ ಕಾರ್ಯಕ್ರಮ. ರಾಜ್ಯದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂಬುದನ್ನು ಸರ್ಕಾರವೇ ಖಾತ್ರಿ ಮಾಡುತ್ತಿದೆ. ಜತೆಗೆ ಶಾಲೆ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ರಸ್ತೆ ಮೇಲೆ ನಿಲ್ಲಿಸಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತಂದು ನಿಲ್ಲಿಸಿ ಅವರಿಗೆ ಪ್ರಜಾಪ್ರಭುತ್ವದ ಪಾಠ ಕಲಿಸಬೇಕಾಗಿತ್ತು. ಕಾಂಗ್ರೆಸ್ ಸರ್ಕಾರದ ಇತಿಹಾಸದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ ಎಂದು ಹೇಳಿದರು.