Advertisement

Bigg Boss: ಹಿಂದಿ ಬಿಗ್‌ ಬಾಸ್‌ ಶೋಗೆ ಬೀದರ್‌ ಯುವಕ!

07:09 PM Oct 19, 2023 | Team Udayavani |

ಬೀದರ್‌: ಹಿಂದಿ ಕಲರ್ ವಾಹಿನಿಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಡೆಸಿಕೊಡುವ ಬಿಗ್‌ ಬಾಸ್‌-17 ರಿಯಾಲಿಟಿ ಶೋಗೆ ಬೀದರ್‌ ಮೂಲದ ಯುವಕ ಅರುಣ ಮಾಶೆಟ್ಟಿ ಪ್ರವೇಶಿಸಿದ್ದಾರೆ. ಜನಪ್ರಿಯ ಯೂಟ್ಯೂಬರ್‌ ಆಗಿರುವ ಅರುಣ್‌ ಅವರು ತಮ್ಮ ಅಜ್ಜನ ಕಾಲದಿಂದ ತೆಲಂಗಾಣದ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

Advertisement

ಇವರು ರಾಷ್ಟ್ರಮಟ್ಟದ ಬಿಗ್‌ಬಾಸ್‌ ಸ್ಪರ್ಧೆಗೆ ಕರ್ನಾಟಕ ಮೂಲದಿಂದ ಪ್ರವೇಶಿಸಿದ ಮೊದಲ ಸ್ಪರ್ಧಾಳು ಎನಿಸಿಕೊಂಡಿದ್ದಾರೆ. ಸಲ್ಮಾನ್‌ ಖಾನ್‌ ನಿರೂಪಕರಾಗಿರುವ ಬಿಗ್‌ ಬಾಸ್‌ನ 17ನೇ ಆವೃತ್ತಿಯಲ್ಲೂ ದೇಶದ ಘಟನಾನುಘಟಿ ಕಲಾವಿದರು, ಖ್ಯಾತನಾಮರು ಭಾಗವಹಿಸಿದ್ದು, ಅದರಲ್ಲಿ ಜನಪ್ರಿಯ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಅರುಣ ಮಾಶೆಟ್ಟಿ ಕೂಡ ಒಬ್ಬರಾಗಿದ್ದಾರೆ.
ಚಿನ್ನದ ವ್ಯಾಪಾರಿಯಾಗಿದ್ದ ಅರುಣ ಅವರ ಅಜ್ಜ ಶಂಕರೆಪ್ಪ ಮಾಶೆಟ್ಟಿ ಹೈದ್ರಾಬಾದ್‌ಗೆ ವಲಸೆ ಹೋಗಿದ್ದರು. ಅರುಣ್‌ ಅವರು ಬೀದರ್‌ ಜಿಲ್ಲೆಯ ರಾಚಪ್ಪ ಗೌಡಗಾಂವ್‌ ಗ್ರಾಮದ ಶಂಕರೆಪ್ಪ ಅವರ ಪುತ್ರ ದಿ| ಬಾಬುರಾವ್‌ ಮಾಶೆಟ್ಟಿ ಅವರ ಪುತ್ರ. ಗ್ರಾಮದಲ್ಲಿ ಜಮೀನು ಮತ್ತು ಬೀದರ್‌ನಲ್ಲಿ ಮನೆ ಹೊಂದಿರುವ ಮಾಶೆಟ್ಟಿ ಕುಟುಂಬ ಈಗಲೂ ಮಣ್ಣಿನ ಸಂಬಂಧ ಹೊಂದಿದೆ.

ಕನ್ನಡದ ಬಗ್ಗೆ ವಿಶೇಷ ಪ್ರೇಮ
ತೆಲುಗಿನಷ್ಟೇ ಸುಲಲಿತವಾಗಿ ಬೀದರ್‌ ಕನ್ನಡವನ್ನೂ ಮಾತನಾಡುವ ಅರುಣ್‌ ಅವರು ಯೂಟ್ಯೂಬ್‌ ಹಾಸ್ಯ ಚಟಾಕಿಗಳಲ್ಲಿ ಕನ್ನಡವನ್ನೂಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ 6.2 ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ಅವರ ಹಾಸ್ಯಭರಿತ ವೀಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅರುಣ್‌ ಪತ್ನಿ ಟುನೇಶಿಯಾ ದೇಶದವರಾಗಿದ್ದು, ಇವರ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅರುಣ್‌ ಹೈದರಾಬಾದ್‌ನ ಚಾರ್‌ಮಿನಾರ್‌ ಪ್ರದೇಶದಲ್ಲಿ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಅ.15ರಿಂದ ಶುರುವಾಗಿರುವ ಬಿಗ್‌ ಬಾಸ್‌ ಹೊಸ ಆವೃತ್ತಿಯಲ್ಲಿ 17 ಮಂದಿ ಪ್ರವೇಶ ಪಡೆದುಕೊಂಡಿದ್ದಾರೆ. ಸನ್ನಿ ಅರ್ಯ, ರಿಂಕು ಧವನ್‌, ಅಭಿಷೇಕಕುಮಾರ್‌, ಇಶಾ ಮಾಳವಿಯಾ, ಸೋನಿಯಾ ಬನ್ಸಾಲ್‌, ಅಂಕಿತಾ ಲೋಖಂಡೆ ಮತ್ತು ಅವರ ಪತ್ನಿ ವಿಕ್ಕಿ ಜೈನ್‌ ಇತರ ಸ್ಪರ್ಧಾಳುಗಳು. ಮನೆಯಲ್ಲಿ ಮೂರು ದಿನಗಳಿಂದ ಹಾಸ್ಯಭರಿತ ಚಟಾಕಿಗಳ ಮೂಲಕ ಉತ್ತಮ ಸ್ಪರ್ಧೆ ನೀಡುತ್ತಿದ್ದಾರೆ. ಬುಧವಾರ ಬಿಗ್‌ ಬಾಸ್‌ ಮನೆಯವರ ಜತೆಗೆ ಮಾತನಾಡುವಾಗ ಕನ್ನಡದ ಬಗ್ಗೆ ಪ್ರಸ್ತಾವಿಸಿದ್ದಾರೆ. ನನಗೆ ಕನ್ನಡ ಬರುತ್ತದೆ, ನನ್ನ ಮಾತೃ ಭಾಷೆ ಕನ್ನಡ ಎನ್ನುವ ಮೂಲಕ ಅಭಿಮಾನ ಮೆರೆದಿದ್ದಾರೆ.

ನನ್ನ ಮಗ ಅರುಣ ರಾಷ್ಟ್ರ ಮಟ್ಟದ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌-17ಗೆ ಪ್ರವೇಶಿಸಿರುವುದು ಹೆಮ್ಮೆಯ ವಿಷಯ. ನಮ್ಮ ಮಾವನ ಕಾಲದಲ್ಲಿ ಹೈದರಾಬಾದ್‌ನಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಮತ್ತು ಬೀದರ್‌ನ ನಂಟನ್ನು ಬಿಟ್ಟಿಲ್ಲ. ಈಗಲೂ ನಮ್ಮ ಮಾತೃ ಭಾಷೆ ಕನ್ನಡವೇ ಆಗಿದೆ. ತನ್ನ ಕೆಲಸ, ಸಾಧನೆ ಮೂಲಕ ದೊಡ್ಡ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿದ್ದು, ಗೆದ್ದು ಬರಲಿ ಎಂದು ಹಾರೈಸುತ್ತೇನೆ. ಇದಕ್ಕಾಗಿ ಬೆಂಬಲಿಸಲು ಎಲ್ಲರಲ್ಲೂ ಮನವಿ ಮಾಡುತ್ತೇನೆ.
– ಗೋದಾವರಿ ಮಾಶೆಟ್ಟಿ, ಅರುಣ ತಾಯಿ

Advertisement

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next