Advertisement

ಬೀದರ್‌ನಲ್ಲಿ ಹೊಸ ಮುಖಗಳ ಹವಣಿಕೆ; ವಿಧಾನಸಭೆ ಚುನಾವಣೆಗೆ ಸದ್ದಿಲ್ಲದೇ ತಯಾರಿ

01:06 AM May 03, 2022 | Team Udayavani |

ಬೀದರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಗೆ ರಣಕಹಳೆ ಮೊಳಗಿಸಿವೆ. ಮತ್ತೊಂದೆಡೆ ವಿವಿಧ ಪಕ್ಷಗಳ ಮೂಲಕ ಈ ಬಾರಿ ಹೊಸ ಮುಖಗಳು ಸ್ಪರ್ಧೆಗಿಳಿಯಲು ಗಡಿ ಜಿಲ್ಲೆ ಬೀದರನಲ್ಲಿ ಸದ್ದಿಲ್ಲದೇ ತಯಾರಿ ಶುರು ಮಾಡಿದ್ದು, ಕುತೂಹಲ ಹೆಚ್ಚಿಸಿದೆ.

Advertisement

ವಿಧಾನಸಭೆಗೆ ಬಹುತೇಕ ಮಾರ್ಚ್‌ ಇಲ್ಲವೇ ಎಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಮೂರು ಪ್ರಬಲ ರಾಜಕೀಯ ಪಕ್ಷಗಳು ಮಿಷನ್‌ 150 ಸ್ಥಾನದ ಗುರಿಯೊಂದಿಗೆ ಚುನಾವಣೆ ರಣತಂತ್ರ ರೂಪಿ­ಸಲು ಅರಂಭಿಸಿವೆ. ಚುನಾ­ವಣ ಚಟುವಟಿಕೆಗಳು ಬಿರುಸು­ಗೊಂಡ ಹಿನ್ನೆಲೆ ಹೊಸ ಆಕಾಂಕ್ಷಿಗಳು ಟಿಕೆಟ್‌ಗಾಗಿ ಈಗಾಗಲೇ ಪೈಪೋಟಿಗಿಳಿ­ದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಜನರನ್ನು ವಿಶ್ವಾಸಕ್ಕೆ ಪಡೆದು ಕಾರ್ಯ ಚಟುವ ಟಿಕೆಗಳನ್ನು ಆರಂಭಿಸಿದ್ದು, ನೆಲೆ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

6 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ರಾಜಕೀಯ ನಾಯಕರು ಮಾತ್ರವಲ್ಲದೇ ನಿವೃತ್ತ ಅಧಿಕಾರಿಗಳು ಸಹ ಈ ಬಾರಿ ಕಣಕ್ಕಿಳಿದು, ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಪಕ್ಷಗಳ ವರಿಷ್ಠರ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ.

ಪ್ರಮುಖವಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾಜಿ ಎಂಎಲ್‌ಸಿ ವಿಜಯಸಿಂಗ್‌ ಅವರು ಹೊಸ ಮುಖವಾಗಿ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ಕಲ್ಯಾಣದಲ್ಲಿ ಬೀಡು ಬಿಟ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಳೆದ ಉಪ ಚುನಾವಣೆಯಲ್ಲಿ ಸೋಲುಂಡಿರುವ ಮಾಲಾ ನಾರಾಯಣರಾವ್‌ ಅಡ್ಡಗಾಲು ಆಗಬಹುದು. ಇನ್ನು ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರ ಎನಿಸಿಕೊಂಡಿರುವ ಹುಮನಾಬಾದ್‌ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಸಿದ್ದು ಪಾಟೀಲ ಬಿಜೆಪಿ ಸೇರ್ಪಡೆಯಾಗಿದ್ದು, ತಮ್ಮ ಸಹೋದರ ಕಾಂಗ್ರೆಸ್‌ನ ಹಾಲಿ ಶಾಸಕರ ಎದುರು ಈಗಾಗಲೇ ತೊಡೆ ತಟ್ಟಿದ್ದಾರೆ. ಕ್ಷೇತ್ರದಲ್ಲಿ ಕಮಲ ಪಡೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಮಾಜಿ ಶಾಸಕ ಸುಭಾಷ ಕಲ್ಲೂರ ಟಿಕೆಟ್‌ ಆಸೆ ಜೀವಂತವಾಗಿದೆ.

ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ ತವರು ಕ್ಷೇತ್ರ ಔರಾದ್‌ನಲ್ಲಿ ಸ್ಪರ್ಧೆಗಿಳಿಯುವ ಹೊಸ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಹಿರಿಯ ಕೆಎಎಸ್‌ ಅಧಿಕಾರಿ ಭೀಮಸೇನ್‌ ಶಿಂಧೆ ಮತ್ತು ಡಾ| ಲಕ್ಷ ¾ಣ ಸೊರಳ್ಳಿಕರ್‌ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇನ್ನೊಂದೆಡೆ ಹುಮನಾಬಾದ್‌ ತಾ.ಪಂ. ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ “ಕೈ’ ಬಿಟ್ಟು ತೆನೆ ಹೊತ್ತಿದ್ದು, ಮೀಸಲು ಕ್ಷೇತ್ರ ಔರಾದನಿಂದ ಮೊದಲ ಬಾರಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

Advertisement

ಅದೇ ರೀತಿ ಬೀದರ ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಸಿಎಂ ದಿ| ಧರಂಸಿಂಗ್‌ ಅವರ ಅಳಿಯ ಚಂದ್ರಾಸಿಂಗ್‌ ಕಾಂಗ್ರೆಸ್‌ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು. ಸುಮಾರು ಐದಾರು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಾಸಿಂಗ್‌ಗೆ “ಕೈ’ ಕೊಟ್ಟಿತ್ತು. ಈ ಬಾರಿ ತಮಗೆ ಬಿ ಫಾರಂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಾಜಿ ಶಾಸಕ ಅಶೋಕ ಖೇಣಿ ಸಹ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದು, ಯಾರಿಗೆ ಟಿಕೆಟ್‌ ಎಂಬುದು ಕಾದು ನೋಡಬೇಕಿದೆ.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next