ಬೀದರ್‌ನಿಂದ ಲೋಹದ ಹಕ್ಕಿಗಳಲ್ಲಿ ಹಾರಾಡಬೇಕೆಂಬ ದಶಕಗಳ ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ. ಯುದ್ಧ ವಿಮಾನಗಳ ತರಬೇತಿಗೆ ಬೀದರ್ ಏರ್‌ಫೋರ್ಸ್ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ಈ ಕೇಂದ್ರಕ್ಕೆ ಹೊಂದಿ ಕೊಂಡಿರುವ 21.6 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ತನ್ಮೂ ಲಕ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿ ಬಳಿಕ ಈಗ ಬೀದರ್‌ನಲ್ಲಿ ರಾಜ್ಯದ 8ನೇ ನಾಗರಿಕ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ.
ಜಿಎಂಆರ್ ನಿರ್ವಹಣೆ-ಕಾರ್ಯಾಚರಣೆ
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯ ( ಉಡಾನ್-ಉಡೆ ದೇಶ್ ಕೆ ಆಮ್ ನಾಗರಿಕ್) ಮೊದಲ ಹಂತದಲ್ಲೇ ಬೀದರ್ ವಿಮಾನ ನಿಲ್ದಾಣ ಆಯ್ಕೆಯಾಗಿದೆ. ಹೈದ್ರಾಬಾದ್ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯೇ ಬೀದರ್ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, 2023ರವರೆಗೆ ಈ ಒಪ್ಪಂದ ಇರಲಿದೆ.
ಬೀದರ್ ಏರ್ ಟರ್ಮಿನಲ್ ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧೀನಕ್ಕೆ ಒಳಪಟ್ಟಿದೆ. ಉಳಿದಂತೆ ವಿಮಾನಯಾನಕ್ಕಾಗಿ ಏರ್‌ಫೋರ್ಸ್‌ನಲ್ಲಿ ಲಭ್ಯವಿರುವ ರನ್‌ವೇ ಮತ್ತು ವಿಮಾನಯಾನ ದಿಕ್ಸೂಚಿ (ವೈಮಾನಿಕ ಸಂಚಾರ) ಕೇಂದ್ರವನ್ನೇ ಬಳಸಿಕೊಳ್ಳಲಾಗುತ್ತಿದೆ. 70 ಆಸನಗಳ ಸೌಲಭ್ಯವುಳ್ಳ ಟ್ರೂಜೆಟ್ ಸಂಸ್ಥೆ ಬೀದರ್-ಬೆಂಗಳೂರು ನಡುವೆ ವಿಮಾನ ಆರಂಭಿಸಲಿದ್ದು, ಪ್ರಯಾಣ 1.40 ಗಂಟೆ ಅವ ಧಿಯದ್ದಾಗಿದೆ.
ಅಡಿಗಲ್ಲು ಹಾಕಿದ್ದ ಬಿಎಸ್‌ವೈ ಉದ್ಘಾಟನೆ ಬೀದರ-ಕಮಠಾಣಾ ರಸ್ತೆಯಲ್ಲಿ ಚಿದ್ರಿ ಬಳಿ 2009ರಲ್ಲಿ ಅಡಿಗಲ್ಲು ಹಾಕಿದ್ದ ಆಗಿನ ಸಿಎಂ ಯಡಿಯೂರಪ್ಪ ಅವರಿಂದಲೇ ವಿಮಾನ ನಿಲ್ದಾಣ ಉದ್ಘಾಟನೆ ಗೊಳ್ಳುತ್ತಿರುವುದು ವಿಶೇಷ. 3.6 ಎಕರೆ ಖಾಸಗಿ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದು 3.54 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಏರ್ ಟರ್ಮಿನಲ್ ಅನ್ನು ನಿರ್ಮಿಸಲಾಗಿತ್ತು. ಆದರೆ, ವಿಮಾನ ಹಾರಾಟಕ್ಕೆ ಅಡ್ಡಿಯಾಗಿದ್ದ ಜಿಎಂಆರ್ ಕಂಪನಿ ಜತೆಗಿನ ವಿಮಾನ ಪ್ರಾಧಿಕಾರದ ಹಳೆ ಒಪ್ಪಂದ (ಜಿಎಂಆರ್ ಉಸ್ತುವಾರಿಯ ಹೈದ್ರಾಬಾದ್ ಮತ್ತು ಬೀದರ್ ನಿಲ್ದಾಣ 150 ಕಿ.ಮೀ. ವ್ಯಾಪ್ತಿಗೊಳಪಟ್ಟಿದ್ದು) ವಿವಾದ ಕಗ್ಗಂಟಾಗಿತ್ತು. ತಾಂತ್ರಿಕ ಸಮಸ್ಯೆ ಪರಿಹರಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ದಶಕದಿಂದ ಬೀದರ್ ವಿಮಾನಯಾನ ನನೆಗುದಿಗೆ ಬಿದ್ದಿತ್ತು. ಉಡಾನ್‌ನಡಿ ಬೀದರ್ ಮೊದಲ ಹಂತದಲ್ಲೇ ಆಯ್ಕೆಯಾದರೂ ವಿಮಾನ ಮಾತ್ರ ಹಾರಾಡಿದ್ದಿಲ್ಲ.
ಸಂಸದ ಭಗವಂತ ಖೂಬಾ ಅವರ ನಿರಂತರ ಪ್ರಯತ್ನದಿಂದ ಜಿಎಂಆರ್ ಸಂಸ್ಥೆಯ ಆಕ್ಷೇಪ ಸೇರಿದಂತೆ ಎಲ್ಲ ವಿಘ್ನಗಳು ಈಗ ನಿವಾರಣೆಯಾಗಿದ್ದಷ್ಟೇ ಅಲ್ಲ ಬೀದರ್ ಟರ್ಮಿನಲ್ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನೂ ಜಿಎಂಆರ್ ಸಂಸ್ಥೆಯೇ ಮಾಡಲಿದೆ. ಹಾಳು ಕೊಂಪೆಯಾಗಿದ್ದ ಟರ್ಮಿನಲ್ ಕೇವಲ 20 ದಿನಗಳಲ್ಲೇ ನವೀಕರಣಗೊಂಡಿದ್ದು, ಕೊಳ್ಳೂರು ಇನಾ ಪ್ರೈವೇಟ್ ಲಿಮಿಟೆಡ್ ಯುದ್ದೋಪಾದಿಯಲ್ಲಿ ನವೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಂಡು ನಿಲ್ದಾಣಕ್ಕೆ ಹೊಸ ರೂಪ ನೀಡಿದೆ. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ಒದಗಿಸಿದೆ.
ಏರ್ ಟರ್ಮಿನಲ್‌ನಲ್ಲಿ ಏನೇನಿದೆ: ಟರ್ಮಿನಲ್‌ನಲ್ಲಿ ಅಗತ್ಯ, ಅತ್ಯಾಧುನಿಕ ಸೌಕರ್ಯ ಕಲ್ಪಿಸಲಾಗಿದೆ. ಸೆಂಟ್ರಲೈಜ್ಡ್ ಎಸಿ, ವಿಐಪಿ ಲಾಂಜ್, ವಿಶ್ರಾಂತಿ ಕೋಣೆ, ಟಿಕೆಟ್ ಕೌಂಟರ್, ಬ್ಯಾಗೇಜ್ ಕೌಂಟರ್, ಚೆಕಿಂಗ್ ವಿಭಾಗ, ಬ್ಯಾಗೇಜ್ ಕ್ಲೇಮ್ ಬೆಲ್ಟ್, ಕನ್ವೇಯರ್ ಬೆಲ್ಟ್, ಬ್ಯಾಗೇಜ್ ಎಕ್ಸ್‌ರೇ ಮಷಿನ್ ಜತೆಗೆ ಶಾಪಿಂಗ್ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿ ಮೂಲ ಸೌಕರ್ಯ ಒದಗಿಸಲಾಗಿದೆ.
ಅಭಿವೃದ್ಧಿಗೆ ಹೇಗೆ ಪೂರಕ: ಕಲ್ಯಾಣ ಕರ್ನಾಟಕದ ಎರಡನೇ ನಾಗರಿಕ ವಿಮಾನಯಾನ ನಿಲ್ದಾಣ ಇದಾಗಿದ್ದು, ಕೈಗಾರಿಕೋದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಪೂರಕವಾಗಲಿದೆ. ಪಶು ವೈದ್ಯಕೀಯ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿನ ಅಪರೂಪದ ಬಿದ್ರಿ ಕಲೆ ವಿಶ್ವದಲ್ಲೇ ಖ್ಯಾತಿ ಹೊಂದಿದೆ. ಜತೆಗೆ ಬಸವಕಲ್ಯಾಣ ಶರಣ ಭೂಮಿ, ಬೀದರ್‌ನ ಐತಿಹಾಸಿಕ ಸ್ಮಾರಕಗಳು, ಗುರುದ್ವಾರ, ನರಸಿಂಹ ಝರಣಾದಂಥ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಒಟ್ಟಾರೆ ಬಂಡವಾಳ ಹೂಡಿಕೆಗೆ ಸಹಕಾರಿಯಾಗಲಿದ್ದು, ಇದರಿಂದ ಜಿಲ್ಲೆಯಲ್ಲಿ ಉದ್ಯೋಗ ಮತ್ತು ಆರ್ಥಿಕ ಸುಧಾರಣೆಗೆ ಅವಕಾಶ ಸಿಕ್ಕಂತಾಗಲಿದೆ.
ಯಾವ ಸ್ಥಳಗಳಿಗೆ ಬೇಡಿಕೆ
ಬೀದರ್‌ನಿಂದ ಬೆಂಗಳೂರು, ಮುಂಬೈ, ಪುಣೆ, ಅಮೃತಸರ್‌ಗೆ ವಿಮಾನಯಾನಕ್ಕೆ ಬೇಡಿಕೆಯಿದೆ. ಈಗ ಟ್ರೂಜೆಟ್ ವಿಮಾನ ಸಂಸ್ಥೆ ಆರಂಭದಲ್ಲಿ ಬೆಂಗಳೂರು-ಕಲಬುರಗಿ ನಡುವೆ ವಿಮಾನಯಾನಕ್ಕೆ ಒಪ್ಪಂದ ಮಾಡಿಕೊಂಡಿದೆ. ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜತೆಗೆ ಬೀದರ ನಿಲ್ದಾಣ ಕಾರ್ಯಾಚರಣೆಯ ಜವಾಬ್ದಾರಿಯನ್ನೂ ಜಿಎಂಆರ್ ಸಂಸ್ಥೆ ಹೊಂದಿರುವುದರಿಂದ ಇಲ್ಲಿಂದ ಯಾವ ಸ್ಥಳಕ್ಕೆ ವಿಮಾನ ಹಾರಿಬೇಕೆಂಬುದನ್ನು ಸಂಸ್ಥೆಯೇ ನಿರ್ಧರಿಸಲಿದೆ. ಮುಂದಿನ ದಿನಗಳಲ್ಲಿ ಜಿಎಂಆರ್ ಸಂಸ್ಥೆ ಹೈದ್ರಾಬಾದನಿಂದ ಬೀದರ (ವಾಯಾ) ಮಾರ್ಗವಾಗಿ ಹೆಚ್ಚುವರಿ ವಿಮಾನ ಹಾರಿಸುವ ಸಾಧ್ಯತೆ ಇದೆ.
ಶಶಿಕಾಂತ ಬಂಬುಳಗೆ