ರಾಯ್‌ಪುರ: 5 ದಿನಗಳ ರಹಸ್ಯಕ್ಕೆ ಕಾಂಗ್ರೆಸ್ ನಾಯಕರು ಕೊನೆಗೂ ಅಂತ್ಯ ಹಾಡಿದ್ದು ಛತ್ತೀಸ್‌ಘಡದ ನೂತನ ಮುಖ್ಯಮಂತ್ರಿಯನ್ನಾಗಿ ಭೂಪೇಶ್ ಬಘೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಸರ್ವಾನುಮತದಿಂದ ಬಘೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಹಲವು ಸುತ್ತುಗಳ ಸಭೆ ಬಳಿಕ ಬಘೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪಿ.ಎಲ್.ಪೂನಿಯಾ ಅವರು ರಾಹುಲ್ ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದ್ದರು.
ಮುಖ್ಯಮಂತ್ರಿ ಹುದ್ದೆಗೆ ಬಘೇಲ್ ಅವರಿಗೆ ಟಿ.ಎಸ್.ಸಿಂಗ್ ದೇವ್, ಚರಣ ದಾಸ್ ಮಹಾಂತ್, ತಾಮ್ರಧ್ವಜ ಸಾಹೂ ಅವರು ಸ್ಪರ್ಧಿಗಳಾಗಿದ್ದರು.
57 ರ ಹರೆಯದ ಬಘೇಲ್ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ರಾಜಕೀಯ ಆರಂಭಿಸಿದ್ದರು. ಛತ್ತೀಸ್‌ಗಢ ವಿಭಜನೆಗೂ ಮುನ್ನ ಮಧ್ಯಪ್ರದೇಶದಲ್ಲಿ ಶಾಸಕರಾಗಿದ್ದ ಬಘೇಲ್ ಅವರು ದಿಗ್ವಿಜಯ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
2004 ಮತ್ತು 2009 ರಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಥಿಸಿ ಸೋಲನ್ನೂ ಅನುಭವಿಸಿದ್ದರು.
ಈ ಬಾರಿ ಚುನಾವಣೆಯಲ್ಲಿ ಪಾಟನ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದರು.