Advertisement

ಆಧುನಿಕ ಹೆಬ್ರಿಯ ರೂವಾರಿ ಭುಜಂಗ ಬಲ್ಲಾಳ್‌

02:21 PM Jun 25, 2020 | mahesh |

ಒಂದು ಕಾಲದಲ್ಲಿ ಮಲೆನಾಡಿನ ಕುಗ್ರಾಮವಾಗಿದ್ದ ಹೆಬ್ರಿಯ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡು ಅದನ್ನು ಸಾಧಿಸಿ ಯಶಸ್ವಿಯಾದವರು ಹೆಬ್ರಿಬೀಡು ದಿ| ಭುಜಂಗ ಬಲ್ಲಾಳರು. ಶ್ರೀ ಅನಂತ ಪದ್ಮನಾಭ ಮತ್ತು ಶ್ರೀ ಅರ್ಧನಾರೀಶ್ವರ ದೇವಸ್ಥಾನಗಳ ಆಡಳಿತ ಮೊಕ್ತೇಸರರಾಗಿ, ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಹೆಬ್ರಿ ಬೋರ್ಡು ಹೈಸ್ಕೂಲಿನ ಸ್ಥಾಪಕರಾಗಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ, ಹೆಬ್ರಿ ಪಂಚಾಯತ್‌ ಅಧ್ಯಕ್ಷರಾಗಿ, ಕಾರ್ಕಳ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹೆಬ್ರಿ ಗ್ರಾಮದ ಪಠೇಲರಾಗಿ ಊರಿನ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದರು. ಈ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಅಧುನಿಕ ಹೆಬ್ರಿಯ ರೂವಾರಿಯೆಂದೇ ಜನಜನಿತರಾದ ಅವರ ಸಾಧನೆ ಬೆರಗು ಹುಟ್ಟಿಸುವಂತಹುದು.

Advertisement

ಹೆಬ್ರಿ ವಾಣಿಜ್ಯ ಕೇಂದ್ರವಾಗಲು
ಗ್ರಾಮದ ಪಠೇಲರಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ, ಊರಿನ ವಾದ ವಿವಾದಗಳನ್ನು ಇದಮಿತ್ಥಂ ಎಂಬಂತೆ ಪರಿಹರಿಸುತ್ತಿದ್ದರು. ವಾಣಿಜ್ಯೋದ್ಯಮಿ ಮತ್ತು ವರ್ತಕ ರಿಗೆ ಪ್ರೋತ್ಸಾಹ ನೀಡಿ, ಇಂದು ಹೆಬ್ರಿ ಉತ್ತಮ ವಾಣಿಜ್ಯ ಕೇಂದ್ರವಾಗಿ ಬೆಳೆಯುವಲ್ಲಿ ಕೊಡುಗೆ ನೀಡಿದ್ದರು.

ಸಮಾಜ ಮಂದಿರ
ಆಗಿನ ಕಾಲದಲ್ಲಿ ಬಹಳ ಅಪರೂಪವಾಗಿದ್ದ, ಸಮಾಜ ಮಂದಿರ ಮತ್ತು ಮಕ್ಕಳ ಆಟದ ಅಂಗಣವನ್ನು ನಿರ್ಮಿಸಿ ಬಾಲವಾಡಿ ತರಗತಿಗಳನ್ನು ಮತ್ತು ಅನೇಕ ಸಭೆ ಸಮಾರಂಭಗಳನ್ನು ನಡೆಸಲು ಅನುವು ಮಾಡಿಕೊಟ್ಟರು.

ಸಮರ್ಥ ಮೊಕ್ತೇಸರರು
“ವಂಶ ಪಾರಂಪರ್ಯವಾಗಿ ತಮಗೆ ಬಂದ ಹೆಬ್ರಿಯ ದೇವಸ್ಥಾನಗಳ ಮೊಕ್ತೇಸರಿಕೆ ಜವಾಬ್ದಾರಿಯನ್ನು ಭುಜಂಗ ಬಲ್ಲಾಳರು 1928ರಿಂದ 1965ರ ವರೆಗಿನ 37 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಚೆನ್ನಾಗಿ ನಿರ್ವಹಿಸಿ ಕಾಲ ಕಾಲಕ್ಕೆ ಸರಿಯಾಗಿ ಪುನರ್‌ನವೀಕರಣ ಮತ್ತು ಬ್ರಹ್ಮಕಲಶಗಳನ್ನೂ ನೆರವೇರಿಸಿದರು’ ಎಂದು ಹೆಬ್ರಿ ದೇವಸ್ಥಾನದ ಆಡಳಿತ ಮೊಕ್ತೇಸರ ಹೆಬ್ರಿಬೀಡು ತಾರಾನಾಥ ಬಲ್ಲಾಳ್‌ ನೆನಪಿಸುತ್ತಾರೆ. ಮದರಾಸು ಮತ್ತು ಮೈಸೂರು ರಾಜ್ಯಗಳಲ್ಲಿ ಮಂತ್ರಿಯಾಗಿದ್ದ ಡಾ| ಎ.ಬಿ. ಶೆಟ್ಟಿಯವರ ಆತ್ಮೀಯರಾಗಿದ್ದು, ಹೆಬ್ರಿಯ ಅಭಿವೃದ್ಧಿಗೆ ಶ್ರಮಿಸಿದ್ದರು. ಇದರ ಫ‌ಲಶ್ರುತಿ ಎಂಬಂತೆ 1955ರ ಫೆ. 3ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಯಿತು.

ನಿಜಲಿಂಗಪ್ಪ ಬಂದಿದ್ದರು
ರೈತರಿಗೆ ಅನುಕೂಲವಾಗಲು 1956ರ ಜೂ. 12ರಂದು ಗೋ ಆಸ್ಪತ್ರೆ ಉದ್ಘಾಟನೆಗೊಂಡಿತ್ತು. 1957ರ ಜ. 15ರಂದು ಸಿಎಂ ಎಸ್‌. ನಿಜಲಿಂಗಪ್ಪ ಅವರಿಂದ ಹೈಸ್ಕೂಲ್‌ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ 1959 ಜೂ. 6ರಂದು ವಿದ್ಯಾ ಮಂತ್ರಿ ಅಣ್ಣಾರಾವ್‌ ಗಣಮುಖೀ ಅವರಿಂದ ಉದ್ಘಾಟಿಸಿದ್ದರು.

Advertisement

ವಿಎಸ್ಸೆಸ್‌ ಸ್ಥಾಪಕಾಧ್ಯಕ್ಷರು
1958ರ ಸೆ. 9ರಂದು ಹೆಬ್ರಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ನಿಧನ ಕಾಲದವರೆಗೂ ಮುನ್ನಡೆಸಿದರು. ಅವರೇ ಪಟೇಲರಾಗಿದ್ದುದರಿಂದ ಹೆಬ್ರಿಯ ಹೃದಯ ಭಾಗದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳ ಮಂಜೂರು ಮಾಡಿಸಿದ್ದರು. ಅಲ್ಲಿಯೇ ಬ್ಯಾಂಕಿನ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಸಾಧ್ಯವಾಯಿತು. “ಕಾರ್ಕಳ ತಾಲೂಕಿನ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಎಂಬ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಭುಜಂಗ ಬಲ್ಲಾಳರು ಹಾಕಿ ಕೊಟ್ಟ ಭದ್ರ ಬುನಾದಿಯೇ ಮೂಲ ಕಾರಣ’ ಎಂದು ಅದರ ಹಾಲಿ ಅಧ್ಯಕ್ಷ ನವೀನ್‌ ಅಡ್ಯಂತಾಯರು ಹೇಳುತ್ತಿದ್ದಾರೆ.

ಜಾನುವಾರು ಜಾತ್ರೆ
ಸೀತಾನದಿಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಜಾನುವಾರು ಜಾತ್ರೆಗೆ, ಹೆಬ್ರಿ ಪಂಚಾಯತ್‌ ಅಧ್ಯಕ್ಷರ ನೆಲೆಯಲ್ಲಿ ಭುಜಂಗ ಬಲ್ಲಾಳರು ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಿ ಅದು ಚೆನ್ನಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದರೆಂದು ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಸೀತಾನದಿ ವಿಠಲ ಶೆಟ್ಟಿ ಅಭಿಪ್ರಾಯ ಪಡುತ್ತಾರೆ.

ಸಾಯುವ ಮುನ್ನಾ ದಿನದ ಠರಾವು
ನಿಧನದ ಮುನ್ನಾ ದಿನವಾದ 31-05- 1965ರಂದು ಅವರು ಸದಸ್ಯರಾಗಿದ್ದ ಕಾರ್ಕಳ ತಾಲೂಕು ಬೋರ್ಡಿನಿಂದ ಹೆಬ್ರಿಯನ್ನು ತಾಲೂಕು ಕೇಂದ್ರ ಮಾಡಬೇಕೆಂಬ ಠರಾವನ್ನು ಮಂಜೂರು ಮಾಡಿಸಿದ್ದರು.

1965ರ ಫ‌ಲ 2018ರಲ್ಲಿ
25-06-1897ರಂದು ಜನಿಸಿದ್ದ ಅವರು, ತನ್ನ 68ನೇ ವಯಸ್ಸಿನಲ್ಲಿ 01-06- 1965ರಂದು ಕಾಲವಾದರು. ಅವರು ಹೆಚ್ಚು ಕಾಲ ಜೀವಿಸುತ್ತಿದ್ದರೆ ಹಲವು ವರ್ಷಗಳ ಹಿಂದೆಯೇ ತಾಲೂಕು ಕೇಂದ್ರವಾಗುತ್ತಿದ್ದ ಹೆಬ್ರಿ, 17-02- 2018 ರಂದು ತಾಲೂಕು ಕೇಂದ್ರವಾಗಿತ್ತು. ಬಲ್ಲಾಳರ ಸಾಧನೆ ಹಿಂದೆ ಪತ್ನಿ ಬೇಳಂಜೆ ಲಕ್ಷ್ಮೀ ಬಲ್ಲಾಳರ ಕೊಡುಗೆ ಉಲ್ಲೇಖ ನೀಯ. ಬಲ್ಲಾಳರಿಗೆ ಮೂವರು ಪುತ್ರರು, ನಾಲ್ವರು ಪುತ್ರಿ ಯರು. ಎಲ್ಲರೂ ಉನ್ನತ ಶಿಕ್ಷಣ ಪಡೆದವರು.

ಸ್ಮಾರಕ ಕಟ್ಟಡದಲ್ಲಿ ಶಾಲೆ
ಇವರ ಸಾಧನೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸ ಲೆಂದು, ಹೆಬ್ರಿಯ ಜನತೆ ಹೆಬ್ರಿ ಭುಜಂಗ ಬಲ್ಲಾಳ ಸ್ಮಾರಕ ನಿರ್ಮಾಣ ಸಮಿತಿಯನ್ನು ಬಿ. ವಿಠuಲ ಹೆಗ್ಡೆ, ಸುಬೋಧ ಬಲ್ಲಾಳ್‌ ಮತ್ತು ಇನ್ನಿತರ ಹಿರಿಯರ ನೇತೃತ್ವದಲ್ಲಿ ರಚಿಸಿ “ಭುಜಂಗ ಬಲ್ಲಾಳ‌ ಸ್ಮಾರಕ’ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಕಟ್ಟಡವನ್ನು ಆಗಿನ ವಿದ್ಯಾಮಂತ್ರಿ ಕೆ.ವಿ. ಶಂಕರೇ ಗೌಡರು 13-11-1967ರಂದು ಉದ್ಘಾಟಿಸಿ ದ್ದ‌ರು. ಈ ಕಟ್ಟಡದಲ್ಲಿ ಹೆಬ್ರಿಯ ಹಿ. ಪ್ರಾ. ಶಾಲೆ ಕಾರ್ಯಾಚರಿಸುತ್ತಿದೆ.

– ಭುವನ ಪ್ರಸಾದ ಹೆಗ್ಡೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next