ನೀನಾಸಂ ಅಭಿನಯದ ಬ್ರಹ್ಮಚಾರಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ವಾರವೇ ಬಿಡುಗಡೆಗೊಳ್ಳಲಿರುವ ಬ್ರಹ್ಮಚಾರಿಯನ್ನು ಆದಷ್ಟು ಬೇಗನೆ ಕಣ್ತುಂಬಿಕೊAಡು ಹಾಸ್ಯದ ಹೊನಲಿನಲ್ಲಿ ಮಿಂದೇಳುವ ಆಸೆ ಹೊತ್ತವರೆಲ್ಲ ಆ ಕ್ಷಣಗಳಿಗಾಗಿ ತಹ ತಹಿಸುತ್ತಿದ್ದಾರೆ. ಇದು ಈ ಸಿನಿಮಾ ಇದುವರೆಗೆ ಸಾಗಿ ಬಂದಿರೋ ರೀತಿಗೆ, ಅದರೊಳಗಿರುವ ಗಟ್ಟಿಯಾದ, ರುಚಿಕಟ್ಟಾದ ಹೂರಣಕ್ಕೆ ಸಂದ ಪ್ರತಿಫಲ. ಇದೆಲ್ಲವನ್ನೂ ಗಮನಿಸಿದರೆ ಬಹ್ಮಚಾರಿ ಸಮಸ್ತ ಪ್ರೇಕ್ಷಕರ ಪಾಲಿಗೆ ಈ ವರ್ಷದ ಕಡೇಯ ಕ್ಷಣಗಳನ್ನು ಚೆಂದಗಾಣಿಸುತ್ತಲೇ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋ ಲಕ್ಷಣಗಳೇ ಎಲ್ಲೆಡೆ ಮಿರುಗುತ್ತಿವೆ.
ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಹೀಗೆ ಬಿಡುಗಡೆಗೂ ಮುನ್ನವೇ ಗೆಲುವಿನ ಪ್ರಭೆಯಲ್ಲಿ ಮಿಂಚುವುದು ಸಾಮಾನ್ಯ. ಸಿನಿಮಾವನ್ನು ವ್ಯವಹಾರಗಳ ಹೊರತಾಗಿ ಪ್ರೀತಿಸುವ ಮನಸ್ಥಿತಿ ಹೊಂದಿರುವ ಅವರು ಕಥೆಗಳ ಆಯ್ಕೆಯಲ್ಲಿಯೂ ಒಂದು ಅಭಿರುಚಿಯನ್ನು ರೂಢಿಸಿಕೊಂಡಿರುವವರು. ಅವರು ನಿರ್ಮಾಣ ಮಾಡಿರುವ ಚಿತ್ರಗಳೆಲ್ಲ ಗೆಲುವು ಕಂಡಿರೋದರ ಹಿಂದೆಯೂ ಅದೇ ಜಾದೂ ಅಡಗಿದೆ. ಹಾಗಿದ್ದ ಮೇಲೆ ಅವರೇ ನಿರ್ಮಾಣ ಮಾಡಿರುವ ಬ್ರಹ್ಮಚಾರಿಯತ್ತ ಬೆರಗೆಲ್ಲ ಒತ್ತರಿಸಿಕೊಳ್ಳದಿರಲು ಸಾಧ್ಯವೇ ಇಲ್ಲ. ನಿಮ್ಮಲ್ಲಿಯೂ ಅಂಥಾ ಬೆರಗೊಂದಿದ್ದರೆ ಅದನ್ನು ಸಂಪೂರ್ಣವಾಗಿ ತಣಿಸುವಂತೆ ಬ್ರಹ್ಮಚಾರಿ ಮೂಡಿ ಬಂದಿದೆ ಅನ್ನೋ ಭರವಸೆಯನ್ನು ಚಿತ್ರತಂಡವೇ ಕೊಡುತ್ತದೆ.
ವಿಶೇಷವೆಂದರೆ ಈ ಚಿತ್ರದಲ್ಲಿ ಇದೇ ಮೊದಲ ಬಾರಿ ನೀನಾಸಂ ಸತೀಶ್ ಮತ್ತು ನಾಗ ಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಅವರ ಸಮಾಗಮವಾಗಿದೆ. ಅವರು ಈಗಾಗಲೇ ಚೆಂದದ ಜೋಡಿಯಾಗಿ ಪ್ರೇಕ್ಷಕರಿಗೆ ಹಿಡಿಸಿದ್ದಾರೆ. ಅದಿತಿ ಬಹು ಕಾಲದಿಂದ ಕಾತರಿಸುತ್ತಿದ್ದಂಥಾ ಹಾಸ್ಯದ ಶೇಡು ಹೊಂದಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಕೂಡಾ ನೀನಾಸಂ ಸತೀಶ್ ಅವರ ಪಾತ್ರದಂಥಾದ್ದೇ ಹಾಸ್ಯದ ಶೇಡ್ ಹೊಂದಿದೆ. ಇವೆರಡರ ಜುಗಲ್ಬಂಧಿಯ ಸಂದರ್ಭದಲ್ಲಿ ಚಿತ್ರತಂಡವಿಡೀ ನಗೆಗಡಲಲ್ಲಿ ತೇಲಾಡಿ ಚಿತ್ರೀಕರಣಕ್ಕೇ ತಾತ್ಕಾಲಿಕ ಬ್ರೇಕ್ ಬೀಳುವ ಸನ್ನಿವೇಶಗಳೂ ಎದುರಾಗಿದ್ದಂತೆ. ಅದು ಬ್ರಹ್ಮಚಾರಿ ಅದೆಷ್ಟು ತೀವ್ರವಾದ ಹಾಸ್ಯ ಸನ್ನಿವೇಶಗಳನ್ನು ಹೊತ್ತು ತರುತ್ತಿದ್ದಾನೆಂಬುದು ಸೂಚಕವೂ ಹೌದು.