ಗದಗ: ಐತಿಹಾಸಿಕ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವೆಂದೇ ಗುರುತಿಸಿಕೊಂಡ ಇಲ್ಲಿನ ಭೀಷ್ಮ ಕೆರೆಯಲ್ಲಿ ಇದೀಗ 2ನೇ ಹಂತದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಸುಮಾರು 9.56 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮತ್ತು ವಿಸ್ತರಣೆ ಮಾಡಲಾಗುತ್ತಿದ್ದು, ಕೆರೆ ಸುತ್ತಲಿನ ಗೇಬಿಯನ್ ವಾಲ್ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಗಮನ ಸೆಳೆಯಲಿವೆ.
ಹೌದು. ನಗರದ ಹೃದಯ ಭಾಗದಲ್ಲಿ ಸುಮಾರು 103 ಎಕರೆ ಪ್ರದೇಶದಲ್ಲಿ ಮೈಯೊಡ್ಡಿಕೊಂಡಿರುವ ಭೀಷ್ಮ ಕೆರೆ ಕೆಲ ವರ್ಷಗಳಿಂದ ಕೊಳಚೆ ನೀರು ಹರಿಸುವ ಗುಂಡಿಯಾಗಿತ್ತು. ಆದರೆ, ಕೆರೆ ಅಂಗಳದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಿಸಿದ್ದರಿಂದ ಐತಿಹಾಸಿಕ ಕೆರೆ ಪುನಃ ತನ್ನ ಮೂಲ ಸ್ವರೂಪಕ್ಕೆ ತಿರುಗುವಂತಾಗಿದೆ. ಶಾಸಕ ಎಚ್.ಕೆ.ಪಾಟೀಲ ಅವರ ದೂರದೃಷ್ಟಿ ಮತ್ತು ಕಾಳಜಿಯಿಂದ ಭೀಷ್ಮಕೆರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಈಗಾಗಲೇ ಕೆರೆ ಅಂಗಳದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ, ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ. ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಕೆರೆಯ 29ಎಕರೆ ಪ್ರದೇಶದಲ್ಲಿ ಹೂಳು ತೆಗೆದು, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸಿದ್ದರಿಂದ ದೋಣಿ ವಿಹಾರ, ಸಾಹಸಿಗರಿಗೆ ಜಲ ಕ್ರೀಡೆಗಳನ್ನು ಸವಿಯುವ ಅವಕಾಶ ಕಲ್ಪಿಸಿದ್ದರಿಂದ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಜಿಲ್ಲಾಡಳಿತ 9.56 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ ಮತ್ತು ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿದೆ.
ಶೇ.100 ಕೆರೆ ವಿಸ್ತರಣೆ: ಕೇಂದ್ರ ಸರಕಾರದ ಅಮೃತ್ ಸಿಟಿ ಯೋಜನೆಯಡಿ ಶೇ.50 ಅನುದಾನ ಲಭಿಸಲಿದ್ದು, ರಾಜ್ಯ ಸರಕಾರ ಶೇ. 20, ಗದಗ-ಬೆಟಗೇರಿ ನಗರಸಭೆಯಿಂದ ಶೇ.30 ವಂತಿಗೆ ಸೇರಿ ಒಟ್ಟು 9.56 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿಂದೆ 29.26 ಎಕರೆ ಪ್ರದೇಶದಲ್ಲಿ ಹೂಳು ತೆಗೆದು ಒಡಲು ತುಂಬಿಸಲಾಗಿತ್ತು. ಆದರೆ, ಇದೀಗ ಬಸವೇಶ್ವರ ಪುತ್ಥಳಿಯ ಬಲ ಮತ್ತು ಹಿಂಭಾಗ ಸೇರಿದಂತೆ ಸುಮಾರು 59.17 ಎಕರೆ ಪ್ರದೇಶದಲ್ಲಿ ಹೂಳು ತೆಗೆಯಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಸವೇಶ್ವರ ಪುತ್ಥಳಿ ಸುತ್ತಲೂ ದೋಣಿ ಹಾಗೂ ಕಾಲ್ನಡಿಗೆಯಲ್ಲೂ ಪ್ರದಕ್ಷಣೆ ಸುತ್ತುವ ಅವಕಾಶ ದೊರೆಯಲಿದೆ.
ಕೆರೆ ಭಾಗದಲ್ಲಿ ಏನೇನು ಇರಲಿದೆ? ಒಟ್ಟು 113 ಎಕರೆ ಪ್ರದೇಶದಲ್ಲಿರುವ ಭೀಷ್ಮ ಕೆರೆಯಲ್ಲಿ ಶೇ.70 ಭಾಗದಲ್ಲಿ ನೀರು ನಿಲುಗಡೆ ಹಾಗೂ ಇನ್ನುಳಿದ ಶೇ.30 ಪ್ರದೇಶದಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತ್ತಿದೆ. ಭೀಷ್ಮಕೆರೆಗೆ ಈಗಿರುವ ಪ್ರವೇಶ ದ್ವಾರ ಬಳಿ ಸುಮಾರು 500 ವಾಹನಗಳಿಗೆ ಸಾಕಾಗುವಷ್ಟು ಪಾರ್ಕಿಂಗ್ ಸ್ಪಾಟ್, ಓಪನ್ ಜಿಮ್, ಫುಡ್ ಕೋರ್ಟ್, ವಸ್ತು ಪ್ರದರ್ಶನ ಮಳಿಗೆ, ಬಯಲು ಚಿತ್ರಮಂದಿರ, ಕಾರಂಜಿ, ಚಿಣ್ಣರ ಈಜುಕೊಳ, ಮಕ್ಕಳ ಉದ್ಯಾನ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ.
ಗೋವಾ ಮೂಲದ ಸಂಸ್ಥೆಗೆ ಕಾಮಗಾರಿ: ಕಾಮಗಾರಿ ಆರಂಭಗೊಂಡು ಈಗಾಗಲೇ ಮೂರ್‍ನಾಲ್ಕು ತಿಂಗಳು ಕಳೆದಿದೆ. ಗೋವಾ ಮೂಲದ ಎಫೆಕ್ಟಿವ್ ಆರ್ಕಿಟೆಕ್ಚರ್ ಸರ್ವೀಸಸ್ ಎಂಬ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ, ಒಂದು ವರ್ಷದೊಳಗೆ ಗದಗ ನಗರದ ಭೀಷ್ಮ ಕೆರೆ ಉತ್ತರ ಕರ್ನಾಟಕ ಪ್ರಮುಖ ಪ್ರವಾಸಿ ತಾಣವಾಗಿ ಗಮನ ಸೆಳೆಯುವ ಸಾಧ್ಯತೆಯಿದೆ.
ಕೆರೆಯ ಸೌಂದರ್ಯವನ್ನು ಸವಿಯಲು ಕೆರೆ ಸುತ್ತಲೂ ಸುಮಾರು 1.9 ಕಿ.ಮೀ.ನಷ್ಟು ವಾಕಿಂಗ್ ಪಾತ್ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಉಪಾಹಾರ ಮಳಿಗೆಗಳು, ಮಕ್ಕಳನ್ನು ಸೆಳೆಯುವ ಈಜುಕೊಳ, ಪಾರ್ಕ್ ಹಾಗೂ ಜಲ ಕ್ರೀಡೆಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಸುಮಾರು 59 ಎಕರೆ ವಿಸ್ತರಣೆಯಿಂದ ನಗರದಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಹೆಚ್ಚುತ್ತದೆ.-
ಎಲ್. ಜಿ. ಪತ್ತಾರ, ನಗರಸಭೆ ಮುಖ್ಯಅಭಿಯಂತರ.
•ವೀರೇಂದ್ರ ನಾಗಲದಿನ್ನಿ