Advertisement

ಪೊಲೀಸರ ಖಡಕ್ ಎಚ್ಚರಿಕೆ: ಭೀಮಾತೀರದ ಮಹಿಳೆ ಸೇರಿ ಇಬ್ಬರು ನಟೋರಿಯಸ್ ನ್ಯಾಯಾಲಯಕ್ಕೆ ಶರಣು

07:07 PM Aug 02, 2022 | Team Udayavani |

ವಿಜಯಪುರ: ಪೊಲೀಸರ ಖಡಕ್ ಎಚ್ಚರಿಕೆ ಬೆನ್ನಲ್ಲೇ ಭೀಮಾ ತೀರ ಎಂಬ ಕುಖ್ಯಾತಿಗೆ ಕಾರಣವಾಗಿರುವ ಜಿಲ್ಲೆಯ ನಟೋರಿಯಸ್ ಗ್ಯಾಂಗ್ ನ ಓರ್ವ ಮಹಿಳೆ ಸೇರಿದಂತೆ ಇಬ್ಬರು ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

Advertisement

2020 ನವೆಂಬರ್ 2 ರಂದು ನಡೆದಿದ್ದ ಭೀಮಾ ತೀರದ ಇನ್ನೋರ್ವ ನಟೋರಿಯಸ್ ರೌಡಿಶೀಟರ್ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶಸ್ತ್ರಾಸ್ತ್ರ ದಾಳಿ ಪ್ರಕರಣದ ಪ್ರಮುಖ ಆರೋಪಿ ವಿಮಲಾಬಾಯಿ ಚಡಚಣ ಹಾಗೂ ಸಹಚರ ಸೋನ್ಯಾ ರಾಠೋಡ ನ್ಯಾಯಾಲಯಕ್ಕೆ ಶರಣಾದ ಆರೋಪಿಗಳು.

ವಿಮಲಾಬಾಯಿ ಚಡಚಣ ಭೀಮಾತೀರದ ನಟೋರಿಯಸ್ ಹಂತಕ ಮಲ್ಲಿಕಾರ್ಜುನ ಚಡಚಣ ಧರ್ಮಪತ್ನಿ.

ಪೊಲೀಸ್ ನಕಲಿ ಎನ್ ಕೌಂಟರ್ ಗೆ ಬಲಿಯಾದ ಧರ್ಮರಾಯ ಚಡಚಣ ಹಾಗೂ ಮಹಾದೇವ ಭೈರಗೊಂಡನಿಂದ ಹತ್ಯೆಯಾಗಿದ್ದ ಗಂಗಾಧರ ಚಡಚಣ ತಾಯಿಯೇ ಈ ವಿಮಲಾಬಾಯಿ.

ತನ್ನ ಇಬ್ಬರು ಮಕ್ಕಳ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ವಿಮಲಾಬಾಯಿ 2020 ನವೆಂಬರ್ 2 ರಂದು ತನ್ನ ಮಕ್ಕಳ ಸಹಚರರಿಂದ ಮಾರಕಾಸ್ರ್ತಗಳ ಮೂಲಕ ಮಹಾದೇವ ಭೈರಗೊಂಡ ಪಯಣಿಸುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾಳೆ.

Advertisement

ಇದನ್ನೂ ಓದಿ:  ಲಾನ್‌ ಬೌಲ್ಸ್‌: ದ. ಆಫ್ರಿಕಾ ವಿರುದ್ಧ ವನಿತಾ ತಂಡದ ಚಿನ್ನದ ಬೇಟೆ

ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಭೈರಗೊಂಡ ಮೇಲಿನ ದಾಳಿ ಪ್ರಕರಣದಲ್ಲಿ ವಿಮಲಾಬಾಯಿ ಎರಡನೇ ಆರೋಪಿಯಾಗಿದ್ದು, ಘಟನೆ ಬಳಿಕ 39ನೇ ಆರೋಪಿ ಸೋನ್ಯಾ ರಾಠೋಡ ಸೇರಿ ಇತರೆ ಆರೋಪಿಗಳೊಂದಿಗೆ ಪರಾರಿಯಾಗಿ, ತಲೆ ಮರೆಸಿಕೊಂಡಿದ್ದಳು.

ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಾವು ನಡೆಸಿದ ಶಾಂತಿಸಭೆಯಲ್ಲಿ ಚಡಚಣ ದಂಪತಿ ಶರಣಾಗತಿಗೆ ತಾಕೀತು ಮಾಡಿದ್ದರು.

ಇದರ ಬೆನ್ನಲ್ಲೇ ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಿದ್ದ ಎಸ್ಪಿ ಆನಂದಕುಮಾರ, ತುರ್ತಾಗಿ ಶರಣಾಗದಿದ್ದರೆ ಚಡಚಣ ಕುಟುಂಬದ ವಿಮಲಾಬಾಯಿ ಹಾಗೂ ಮಲ್ಲಿಕಾರ್ಜುನ ದಂಪತಿಗೆ ಸೇರಿದ ಆಸ್ತಿ‌ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿದ್ದರು.

ಎಸ್ಪಿ ಅವರ ಎಚ್ಚರಿಕೆ ಬೆನ್ನಲ್ಲೇ ಸಹಚರ ಸೋನ್ಯಾ ರಾಠೋಡ ಜೊತೆ ವಿಮಲಾಬಾಯಿ ಮಂಗಳವಾರ ವಿಜಯಪುರ ಜಿಲ್ಲಾ 4ನೇ ಜೆಎಂಎಫ್‌ಸಿ ಕೋರ್ಟ್‌ಗೆ ಶರಣಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next