Advertisement

ಜೀವನಶೈಲಿ ಸರಿದಾರಿಗೆ ತರುವ ಕೆಲಸವಾಗಲಿ

12:03 PM May 16, 2022 | Team Udayavani |

ಹುಬ್ಬಳ್ಳಿ: ಇಂದಿನ ನಮ್ಮ ಜೀವನದ ಶೈಲಿ ಬದಲಾಗಿದ್ದು ಅದನ್ನು ಮೊದಲು ಸರಿದಾರಿಗೆ ತರಬೇಕಾಗಿದೆ. ಅದಕ್ಕಾಗಿ ಇಂತಹ ಸಂಗೀತ ಕಾರ್ಯಕ್ರಮ ಅವಶ್ಯ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ನಡೆದ ಭಾರತರತ್ನ ಪಂ| ಭೀಮಸೇನ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭೀಮಸೇನ ಜೋಶಿ ಅವರ 100ನೇ ವರ್ಷದ ಜನ್ಮ ಶತಮಾನೋತ್ಸವ ರಾಜ್ಯಾದ್ಯಂತ ಮಾಡಬೇಕೆನ್ನುವ ಎಲ್ಲರ ಆಸೆಯಂತೆ ಮಾಡಲಾಗಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ, ಯೋಗ, ಶಿಕ್ಷಣಗಳಲ್ಲಿ ನಮ್ಮತನ ಉಳಿಸಿಕೊಳ್ಳುವಂತ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ನಮ್ಮ ದೇಶದ ಯೋಗವನ್ನು ಇಂದು ಜಗತ್ತಿನ ನೂರಾರು ದೇಶಗಳು ಅನುಸರಿಸುತ್ತಿದೆ. ಆದರೆ ನಮ್ಮವರು ಪಾಶ್ಚಿಮಾತ್ಯಕ್ಕೆ ಮೊರೆ ಹೋಗುತ್ತಿರುವುದು ವಿಪರ್ಯಾಸ. ನಮ್ಮ ಪಠ್ಯಪುಸ್ತಕದಲ್ಲಿ ಏನಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದ್ದು, ಬುದ್ಧಿಜೀವಿಗಳು ಎಂದೆನಿಸಿಕೊಂಡವರು ನಮ್ಮತನ ಹಾಳು ಮಾಡಲು ಮುಂದಾಗಿದ್ದಾರೆ. ಅಂತಹ ಕೆಲಸಕ್ಕೆ ತುಕಡೆ ತುಕಡೆ ಗ್ಯಾಂಗ್‌ ಸಹ ಮುಂದಾಗಿದ್ದರೂ ಸಾಧ್ಯವಾಗಿಲ್ಲ. ನಮ್ಮ ಜೀವನ ಪದ್ಧತಿ, ವ್ಯಾಯಾಮ, ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನು ನಾವು ಅನುಸರಿಸುವ ಮೂಲಕ ನಮ್ಮತನ ಉಳಿಸಿಕೊಳ್ಳಬೇಕೆಂದರು.

ಸಂಗೀತದ ಸ್ವರಗಳ ಆವಾಹನೆ ಮಾಡಿಕೊಳ್ಳಬೇಕು. ಅಂದಾಗ ದೇವಲೋಕದಿಂದ ಸ್ವರಗಳು ಬರುತ್ತಿರುತ್ತವೆ ಎಂದು ಪಂ| ಭೀಮಸೇನ ಜೋಶಿ ಅವರು ಹೇಳುತ್ತಿದ್ದರು. ರೋಗಗಳನ್ನು ಗುಣಮುಖ ಮಾಡುವ ಶಕ್ತಿ ಸಂಗೀತದಲ್ಲಿದೆ. ಮಕ್ಕಳಲ್ಲಿರುವ ಪ್ರತಿಭೆ ಬೆಂಬಲಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲ ಪಾಲಕರು ಮಾಡಬೇಕು ಎಂದು ಹೇಳಿದರು.

Advertisement

ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಂ| ಭೀಮಸೇನ ಜೋಶಿ ಅವರ ಕಾರ್ಯಕ್ರಮ ರಾಜ್ಯಾದ್ಯಂತ ಮಾಡಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಅವರ ಮುಂದೆ ಪ್ರಸ್ತಾಪಿಸಿದಾಗ ಅವರು ಕೂಡಾ ಕೈ ಜೋಡಿಸಿ ಅವರಿಂದ ಆದ ಎಲ್ಲ ಸಹಾಯ ಸಹಕಾರ ನೀಡಿದರು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿದರು. ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಂಗೀತ ದಿಗ್ಗಜರ ಗಾಯನ-ವಾದನ ಅಕ್ಷರಶಃ ಸಂಗೀತ ಲೋಕ ಸೃಷ್ಟಿಸಿತ್ತು.

ರವಿವಾರ ಬೆಳಗ್ಗೆ ಗಣಪತಿ ಭಟ್‌ ಹಾಸಣಗಿ ಅವರ ಸಂಗೀತಕ್ಕೆ ಶ್ರೀಧರ ಮಾಂಡ್ರೆ ತಬಲಾ, ಪಂ| ವ್ಯಾಸಮೂರ್ತಿ ಕಟ್ಟಿ ಸಂವಾದಿನಿ ಸಾಥ್‌ ನೀಡಿದರು. ಪಂ| ಪ್ರವೀಣ ಗೋಡಿRಂಡಿ ಹಾಗೂ ಷಡ್ಜ ಗೋಡ್ಕಿಂಡಿ  ಅವರ ಕೊಳಲು ವಾದನಕ್ಕೆ ದೇಬಜಿತ್‌ ಪಟ್ಟಿತುಂಡಿ ತಬಲಾ ಸಾಥ್‌ ನೀಡಿದರು. ರಮಾಕಾಂತ ಗಾಯಕ್ವಾಡ ಹಾಗೂ ಆದಿತ್ಯ ಮೋದಕ ಅವರ ಜುಗಲಬಂದಿಗೆ ಡಾ| ಉದಯ ಕುಲಕರ್ಣಿ ತಬಲಾ, ಪಂ| ವ್ಯಾಸಮೂರ್ತಿ ಕಟ್ಟಿ ಸಂವಾದಿನಿ ಸಾಥ್‌ ನೀಡಿದರು. ವಿದುಷಿ ಗೌರಿ ಪಠಾರೆ ಗಾಯನಕ್ಕೆ ಪಂ| ರಘುನಾಥ ನಾಕೋಡ್‌ ತಬಲಾ, ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ ಸಾಥ್‌ ನೀಡಿದರು. ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ ಹಾಗೂ ವಿದುಷಿ ಮಿತಾ ನಾಗ್‌ ಅವರ ಸರೋದ್‌ ಹಾಗೂ ಸಿತಾರ್‌ ಜುಗಲಬಂದಿ, ಮಿಶ್ರಪಾಗ ರಾಗಗಳ ಸಂಯೋಜನೆ ಆಕರ್ಷಕವಾಗಿ ಮೂಡಿಬಂತು. ಕೊನೆಯಲ್ಲಿ ಪಂ| ಜಯತೀರ್ಥ ಮೇವುಂಡಿ ಗಾಯನ ಹಾಗೂ ವಿದುಷಿ ಕಲಾ ರಾಮನಾಥ ಕೊಳಲು ಮತ್ತು ವಯಲಿನ್‌ ವಾದನ ಪ್ರಸ್ತುತ ಪಡಿಸಿದರು. ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಹಾಗೂ ಓಝಸ್‌ ಆಧ್ಯಾ ತಬಲಾ ಸಾಥ್‌ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next