ಶಿರಸಿ: ಬಾಳು ಬೆಳಗಿ ಬದುಕ ಬೇಕಿದ್ದ ಹುಡುಗನೋರ್ವ ಮೃತಪಟ್ಟು ಅಂತಿಮವಾಗಿ ಆಸ್ಪತ್ರೆಯಿಂದ ಶವವನ್ನೂ ಊರಿಗೆ ತರಲಾಗದ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶಾಸಕ ಭೀಮಣ್ಣ ನಾಯ್ಕ ಮಾನವೀಯ ಸ್ಪಂದನೆ ನೀಡಿದ ಘಟನೆ ವರದಿಯಾಗಿದೆ.
ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿರಸಿ ತಾಲೂಕಿನ ಗೋಳಿಯ ಸಮೀಪ ಇರುವ ಅಮ್ಮಚ್ಚಿಯ ಗಣೇಶ್ ಗಣಪ ಗೌಡ ಎನ್ನುವ 20 ವರ್ಷದ ಯುವಕ ಕಳೆದ ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು.
ಹುಡುಗನ ದಿಢೀರ್ ಸಾವಿನಿಂದ ಕುಟುಂಬಸ್ಥರು ಮತ್ತು ಊರಿನವರು ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, ಆಸ್ಪತ್ರೆಯವರು ಶವವನ್ನು ತಕ್ಷಣ ಕೊಂಡೊಯ್ಯಿರೆಂದು ಒತ್ತಾಯಿಸಲಾರಂಬಿಸಿದ್ದರು. ಈಗಾಗಲೇ ಕಂಡ ಕಂಡವರಿಂದ ಹಣವನ್ನು ಸ್ವೀಕರಿಸಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆವು. ನಮ್ಮ ಬಳಿ ಇನ್ನೇನೂ ಉಳಿದಿರಲಿಲ್ಲ. ಆಂಬುಲೆನ್ಸ್ ನವರು ಶವವನ್ನು ಶಿರಸಿಗೆ ಸ್ಥಳಾಂತರಿಸಲು 12,000 ರೂ.ಹಣವನ್ನು ಕೇಳುತ್ತಿದ್ದರು. ರಾತ್ರಿ 10ರ ಸಂದರ್ಭದಲ್ಲಿ ನಾವು ಯಾರನ್ನು ದುಡ್ಡಿಗಾಗಿ ಕೇಳುವುದು ಎಂತಲೇ ಅರ್ಥವಾಗದ ಸ್ಥಿತಿಯಲ್ಲಿ ಇದ್ದಾಗ
ಯಾರೋ ವಿಷಯವನ್ನು ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕ್ ಅವರಿಗೆ ತಿಳಿಸಿದ್ದರಂತೆ. ಅವರ ಕಾರ್ಯದರ್ಶಿಯಿಂದ ಫೋನ್ ಕರೆ ಬಂತು. ಈ ದುರಂತ ನಡೆದಿದ್ದು ಹೌದೋ ಎಂದು ಅವರು ಮೊದಲು ಧೃಡೀಕರಿಸಿಕೊಂಡು ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡಿ ನೆರವಾದರು ಎಂದು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಮುಂದಿನ ಅರ್ಧ ಗಂಟೆಯಲ್ಲಿ ಆಂಬುಲೆನ್ಸ್ ಬಂತು. ಊರಿನ ಎಲ್ಲಾ 9 ಮಂದಿ ಆಂಬುಲೆನ್ಸ್ ನಲ್ಲಿ ಶವವನ್ನು ತೆಗೆದುಕೊಂಡು ಶಿರಸಿಗೆ ತಂದೆವು. ಅಂಬುಲೆನ್ಸ್ ನ ಎಲ್ಲಾ ಖರ್ಚನ್ನು ಶಾಸಕರೇ ನೀಡಿದರು ಎನ್ನುತ್ತಾರೆ ಊರವರು. ಮಾನವೀಯತೆಯಿಂದ ಭೀಮಣ್ಣ ನೆರವಾದರು ಎನ್ನುತ್ತಾರೆ ಗ್ರಾಮಸ್ಥರು.