ಶಿರಸಿ: ತಂದೆ ತಾಯಿ ನೋಡಿಕೊಳ್ಳದ ಮಕ್ಕಳಿಗೆ ಮನೆ ಕೊಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ತಾಲೂಕಿನ ಯಡಹಳ್ಳಿಯಲ್ಲಿ ಸೋಮವಾರ 2020-21ನೇ ಸಾಲಿನ ವಸತಿ ಯೋಜನೆಯ ಕಾಮಗಾರಿ ಆದೇಶ ಪತ್ರ ವಿತರಿಸಿ, ಒಂದು ಪಂಚಾಯ್ತಿಯಲ್ಲಿ ಕಾಮಗಾರಿ ಆದೇಶ ಪ್ರಮಾಣ ಪತ್ರ ವಿತರಿಸಿ ಹಿಂದೆ ನಡೆದ ಘಟನೆಯೊಂದನ್ನು ನೆನಪಿಸಿಕೊಂಡರು.
ಒಂದು ಪಂಚಾಯ್ತಿಯಲ್ಲಿ ಹಕ್ಕು ಪತ್ರ ಕೊಡುವ ವೇಳೆ ತಾಯೊಬ್ಬಳು ಮದ್ವೆ ಆದ ಬಳಿಕ ಮಗ ಹೊರಗೆ ಹೋದ ಸಂಗತಿ ಹೇಳಿದಳು. ನನಗೆ ಮನೆ ಕಾಮಗಾರಿ ಹಕ್ಕು ಪತ್ರ ಸಿಕ್ಕಿದೆ. ಹೇಗೆ ಕಟ್ಟಿಕೊಳ್ಳಲಿ ಎಂದು ಕಣ್ಣೀರಿಟ್ಟಳು. ಆ ತಾಯಿಯ ಮನೆಯನ್ನು ಪಂಚಾಯ್ತಿ ಸದಸ್ಯರು ಮುಂದೆ ನಿಂತು ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಆ ಮಾದರಿಯ ಘಟನೆಗಳು ಆಗಬಾರದು. ಬೆಳಸಿದ ಮಕ್ಕಳು ತಂದೆ ತಾಯಿಗೆ ವಯಸ್ಸಾದ ಬಳಿಕ ಮನೆಯಿಂದ ಹೊರಗೆ ಹಾಕಿದರೆ, ಬಿಟ್ಟು ಹೋದರೆ ಮರಳಿ ಬಿಟ್ಟು ಹೋದ ಮಕ್ಕಳು ಆಶ್ರಯ ಮನೆಗೆ ಅರ್ಜಿ ಹಾಕಿದರೆ ಸೌಲಭ್ಯ ಕೊಡಲು ಯೋಚಿಸಬೇಕಾಗಿದೆ ಎಂದ ಅವರು ಯಾವ ಮಕ್ಕಳೂ ಅಪ್ಪ ಅಮ್ಮನಿಗೆ ನೋವು ಕೊಡಬಾರದು ಎಂದರು.
ಕ್ಷೇತ್ರದಲ್ಲಿ ಅರ್ಹ ವಸತಿ ಫಲಾನುಭವಿಗಳಿಗೆ ಮನೆ ಇಲ್ಲ ಎಂಬ ಸ್ಥಿತಿ ಆಗಬಾರದು. ಮಳೆಗಾಲದ ಒಳಗೆ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ವಸತಿ ನಿರ್ಮಾಣಕ್ಕೆ ಅಧಿಕಾರಿಗಳು ಕಿರುಕುಳ ನೀಡಿದರೆ ಮಾಹಿತಿ ನೀಡುವಂತೆ ಹೇಳಿದರು.
ಈ ವೇಳೆ ತಾ.ಪಂ ಇಓ ಸತೀಶ ಹೆಗಡೆ, ಗ್ರಾ.ಪಂ.ಅಧ್ಯಕ್ಷ ಭಾಸ್ಕರ ಶೆಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಗೌಡ, ಪ್ರಮುಖರಾದ ಎಸ್.ಕೆ.ಭಾಗವತ, ಪಿಡಿಓ ಕಮಲಾಕ್ಷಿ ನಾಯ್ಕ, ಕಾರ್ಯದರ್ಶಿ ಚಂದ್ರಕಾಂತ ಕಾರಂತ ಇತರರು ಇದ್ದರು.
ಇದನ್ನೂ ಓದಿ: Bilkis Bano case:11 ಅಪರಾಧಿಗಳ ಬಿಡುಗಡೆ-ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ