ಹೊಸದಿಲ್ಲಿ : ಪುಣೆ ಪೊಲೀಸರು ಇಂದು ದೇಶಾದ್ಯಂತ ಮಾವೋ ನಂಟು ಹೊಂದಿರುವ ಶಂಕೆಯಲ್ಲಿ ಹಲವಾರು ಪ್ರಮುಖ ವಕೀಲರು ಮತ್ತು ಮಾನವ ಹಕ್ಕು ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಕನಿಷ್ಠ ಮೂವರು ಮಾವೋ ನಾಯಕರನ್ನು ಬಂಧಿಸಿದ್ದಾರೆ.
2017ರ ಡಿಸೆಂಬರ್ 31ರಂದು ಏಳ್‌ಗಾರ್ ಪರಿಷತ್ ನಡೆದುದನ್ನು ಅನುಸರಿಸಿ ನಡೆದಿದ್ದ ಭೀಮಾ ಕೋರೇಗಾಂವ್ ಹಿಂಸೆಗೆ ಸಂಬಂಧಿಸಿ ಮಾವೋ ನಂಟು ಹೊಂದಿರುವ ಪ್ರಮುಖ ವ್ಯಕ್ತಿಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದರು. ಬಂಧಿತ ನಾಯಕರಲ್ಲಿ ಕ್ರಾಂತಿಕಾರಿ ಲೇಖಕ ಪಿ ವರವರ ರಾವ್ ಮತ್ತು ಕಾರ್ಯಕರ್ತ ಗೌತಮ್ ನವಲಾಖ ಮುಖ್ಯರಾಗಿದ್ದಾರೆ.
ಪುಣೆ ಪೊಲೀಸರು ನವಲಾಖ ಅವರನ್ನು ಆ.31ರ ವರೆಗಿನ ಅವಧಿಗೆ ಟ್ರಾನ್ಸಿಟ್ ರಿಮಾಂಡ್‌ಗೆ ಪಡೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪುಣೆ ಪೊಲೀಸರು ವಕೀಲರಾದ ವರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ್ ಪಿರೇರಾ ಅವರ ಮುಂಬಯಿ ನಿವಾಸಗಳ ಮೇಲೆ ದಾಳಿ ನಡೆಸಿದ ಶೋಧ ಕಾರ್ಯ ನಡೆಸಿದ್ದಾರೆ. ಇವರು ಮಾವೋ ನಂಟು ಹೊಂದಿದ ಕಾರಣಕ್ಕೆ ಬಂಧಿತರಾಗಿದ್ದ ಐವರು ಆರೋಪಿಗಳ ಕೇಸನ್ನು ನಿರ್ವಹಿಸುತ್ತಿದ್ದರು.
ರಾಂಚಿಯಲ್ಲಿನ ಫಾದರ್ ಸ್ಟಾನ್ ಸ್ವಾಮಿ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪತ್ರಕರ್ತ ತೇಕುಲ ಕ್ರಾಂತಿ ಅವರನ್ನು ಬಂಧಿಸಿದ್ದಾರೆ. ಮಾನವ ಹಕ್ಕುಗಳ ವಕೀಲ ಮತ್ತು ಕಾರ್ಮಿಕ ಸಂಘನೆಗಾರ ಸುಧಾ ಭಾರದ್ವಾಜ್ ಅವರ ಫರೀದಾಬಾದ್ ನಿವಾಸದ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ.