ವಿಜಯಪುರ: ದಕ್ಷಿಣದ ಕಾವೇರಿ ಕಣಿವೆಯಲ್ಲಿ ಪ್ರವಾಹ ಪರಿಸ್ಥಿತಿ ಕೊಡವರ ಬದುಕನ್ನು ಹೈರಾಣಾಗಿಸಿದ ಬೆನ್ನಲ್ಲೇ ಉತ್ತರ ಕರ್ನಾಟಕದಲ್ಲೂ ನೆರೆ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಅಲ್ಲಿನ ವೀರ ಧರಣಿ ನದಿ ನೆರೆಯುಕ್ಕುತ್ತಿದೆ. ಮಹಾರಾಷ್ಟ್ರದ ಮೂಲಕ ಕರ್ನಾಟಕಕ್ಕೆ ಹರಿಯುತ್ತಿರುವ ಭೀಮಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ನೆರೆ ಭೀತಿ ಎದುರಾಗಿದೆ. ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಹರಿಯುವ ನದಿಗಳಿಗೆ ಮುನ್ಸೂಚನೆ ನೀಡದೇ ಅಧಿ ಕ ನೀರು ಹರಿಸುತ್ತಿದ್ದು, ಭೀಮಾ ನದಿಗೆ ಕಟ್ಟಿರುವ ಎಂಟು ಬ್ಯಾರೇಜುಗಳು ತುಂಬಿ ಹರಿಯುತ್ತಿವೆ. ಕೃಷ್ಣಾ ನದಿಗೆ ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಹಾಗೂ ಬಸವ ಸಾಗರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಒಳ, ಹೊರ ಹರಿವಿನ ಪ್ರಮಾಣ 1.63 ಲಕ್ಷ ಕ್ಯುಸೆಕ್ ನೀರು ಜಲಾಶಯಗಳ ಗೇಟ್ ಮೂಲಕ ಕೃಷ್ಣಾ ನದಿಗೆ ಹರಿಯ ತೊಡಗಿದೆ.
ಭೀಮಾ ತೀರದಲ್ಲಿರುವ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕಿನ ಹಳ್ಳಿಗಳ ಜಮೀನಿಗೆ ನೀರು ನುಗ್ಗುವ ಭೀತಿ ಇದ್ದು, ಹಲವು ಜನವಸತಿ ಪ್ರದೇಶಗಳೂ ನೆರೆಯ ಭೀತಿ ಎದುರಿಸುತ್ತಿವೆ. ಮತ್ತೂಂದೆಡೆ ಭೀಮಾ ತೀರದಲ್ಲಿ ರೈತರು ಕೃಷಿಗಾಗಿ ಹಾಕಿಕೊಂಡಿದ್ದ ಪಂಪ್‌ಸೆಟ್‌ಗಳನ್ನು ತೆಗೆಯಲು ಪರದಾಡುತ್ತಿದ್ದಾರೆ. ಅನಿರೀಕ್ಷಿತವಾಗಿ ಸೃಷ್ಟಿಯಾಗಿರುವ ಪ್ರವಾಹದ ಪರಿಸ್ಥಿತಿ ರೈತರನ್ನು ಹೈರಾಣಾಗಿಸಿದೆ.
ಈ ಮಧ್ಯೆ ದಶಕದ ಹಿಂದೆಯೇ ಭೀಮಾ ನದಿಗೆ ಕಟ್ಟಿರುವ ಸೊನ್ನ ಬ್ಯಾರೇಜು ಸಂತ್ರಸ್ತ ಗ್ರಾಮವಾಗಿರುವ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಪುನರ್ವಸತಿ ಪೂರ್ಣಗೊಳ್ಳದ ಕಾರಣ ಮುಳುಗಡೆ ಭೀತಿ ಎದುರಿಸುವಂತಾಗಿದೆ. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಹಾಗೂ ನಿವೇಶನ ಹಂಚಿಕೆಯಲ್ಲಿ ಅವೈಜ್ಞಾನಿಕ ನೀತಿ ಅನುಸರಿಸಲಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಪರಿಣಾಮ ಗ್ರಾಮಸ್ತರು ಭೀಮೆಯ ಪ್ರವಾಹದ ನೀರು ನುಗ್ಗುವ ಭೀತಿಯಿಂದ ಕಂಗಾಲಾಗಿದ್ದಾರೆ.
ಭೀಮಾ ನೆರೆಯ ಪರಿಸ್ಥಿತಿ ಸೃಷ್ಟಿಸುವ ಮಾಹಿತಿ ದೊರೆಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ತಾರಾಪುರ ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೇ ನೆರೆಯ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮುನ್ನಚ್ಚರಿಕೆ ವಹಿಸಬೇಕು. ನದಿ ತೀರಕ್ಕೆ ಜನ, ಜಾನುವಾರು ಹೋಗದಂತೆ ಎಚ್ಚರಿಕೆಯಿಂದ ಇರಬೇಕು. ಸಂಬಂ ಧಿಸಿದ ಅ ಧಿಕಾರಿಗಳು ತೀವ್ರ ನಿಗಾ ವಹಿಸಿ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ.