ಬೀದರ: ನೆರೆ ಸಂಭವಿಸಿದ ಪ್ರದೇಶಗಳಲ್ಲಿ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲಗೊಂಡಿವೆ. ನೆರೆ ಪ್ರದೇಶದಲ್ಲಿನ ಜನರು ಸತ್ತಮೇಲೆ ಸರ್ಕಾರ ಪರಿಹಾರ ನೀಡುತ್ತದೆಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ನೆರೆ ಹಾವಳಿ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ನೆರೆ ಪರಿಸ್ಥಿತಿ ಕುರಿತು ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ನಡೆಸಿ 40 ದಿನಗಳು ಕಳೆದರೂ ಕೂಡ ಈವರೆಗೆ ಕೇಂದ್ರ ಸರ್ಕಾರದಿಂದ ನಯಾಪೈಸೆ ಬಂದಿಲ್ಲ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಜನರು ಸತ್ತಮೇಲೆ ಪರಿಹಾರ ಬರುತ್ತದಾ ಎಂದು ಪ್ರಶ್ನಿಸಿದರು. 2008-09ರಲ್ಲಿ ರಾಜ್ಯದಲ್ಲಿ ಇದೇ ಪರಿಸ್ಥಿತಿ ಉಂಟಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ರಾಜ್ಯದ ಸ್ಥಿತಿ ನೋಡಿ ಯುಪಿಎ ಸರ್ಕಾರ ಕೂಡಲೇ ಎರಡು ಸಾವಿರ ಕೋಟಿ ಪರಿಹಾರ ಕಲ್ಪಿಸಿತ್ತು. ಆದರೆ, ಇಂದು ನೆರೆ ಸಂತ್ರಸ್ಥರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ಯಾಕೆ ಮತ ಹಾಕಿದರು ಎಂಬುದು ಇಂದಿಗೂ ಗೊತ್ತಾಗಿಲ್ಲ. ಚುನಾವಣೆಯಲ್ಲಿ ಇವಿಎಂಗಳ ಸಮಸ್ಯೆ ಇತ್ತೋ ಏನೊ ಎಂಬುದು ಗೊತ್ತಾಗಿಲ್ಲ ಎಂದ ಅವರು, ಜನರ ಸಂಕಷ್ಟಕ್ಕೆ ಆಡಳಿತ ಪಕ್ಷದವರು ಸ್ಪಂದಿಸುತ್ತಿಲ್ಲ. ಲೋಕ ಸಭೆ ಚುನಾವಣೆಯಲ್ಲಿ ಗೆದ್ದ ಸದಸ್ಯರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಕೂಡ ಬಿಜೆಪಿ ಸರ್ಕಾರ ಇದ್ದರೂ ಕೂಡ ನೆರೆ ಸಂತ್ರಸ್ತರಿಗೆ ನೆರವು ದೊರೆಯುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಸಂಭವಿಸಿದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು. ಈ ಮೂಲಕ ಕೇಂದ್ರ ಸರ್ಕಾರದ ವಿಶೇಷ ಅನುದಾನ ರಾಜ್ಯಕ್ಕೆ ದೊರೆಯುತ್ತಿತ್ತು. ಆದರೆ, ಸದ್ಯ ಪ್ರತಿ ಜಿಲ್ಲೆಗೆ ಎರಡು ಮೂರು ಕೋಟಿ ಅನುದಾನ ಮಾತ್ರ ಕಲ್ಪಿಸಿದ್ದು, ಕೂಡಲೇ ಸರ್ಕಾರ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉಂಟಾದ ಸ್ಥಿತಿಯಿಂದ 88 ಜನರು ಪ್ರಾಣ ಕಳೆದುಕೊಂಡಿದ್ದಾರೆ. 10 ಜನರು ಕಾಣೆಯಾಗಿದ್ದಾರೆ. 7 ಲಕ್ಷ ಜನರು ಮನೆ ಕಳೆದುಕೊಂಡಿದ್ದಾರೆ. ರೈತರು 7.90 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಕಳೆದುಕೊಂಡಿದ್ದಾರೆ. 2.37 ಲಕ್ಷ ಮಳೆಗಳಿಗೆ ಹಾನಿ ಸಂಭವಿಸಿದೆ. 35 ಸಾವಿರ ಕಿ.ಮೀ. ರಸ್ತೆ ಹಾಳಾಗಿದೆ. ಅಲ್ಲದೆ, ಅನೇಕ ಪ್ರಮಾಣದ ಹಾನಿ ಸಂಭವಿಸಿದೆ. ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ನೀಡಬೇಕು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದ ಅವರು, ಕೂಡಲೆ ಸರ್ಕಾರ ಸಂತ್ರಸ್ತರ ನೇರವಿಗೆ ಧಾವಿಸದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಆನಂದ ದೇವಪ್ಪ, ದತ್ತು ಮೂಲಗಿ, ನರಸಿಂಗ್‌ರಾವ್ ಸೂರ್ಯವಂಶಿ, ಕೆ.ಪುಂಡಲಿಕರಾವ್, ಎಂ.ಎ. ಸಮಿ, ಎಂ.ಡಿ. ಫೇರೊಜ್ ಖಾನ್, ಚಂದ್ರಸಿಂಗ್ ಇದ್ದರು.