Advertisement

ಮಾರುಕಟ್ಟೆಗೆ ಬಾರದ “ಹಸಿರು’ಪಟಾಕಿ

11:51 AM Oct 27, 2019 | |

ಶಶಿಕಾಂತ ಬಂಬುಳಗೆ

Advertisement

ಬೀದರ: ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ “ಹಸಿರು’ ಪಟಾಕಿಯನ್ನ ಬಿಡುಗಡೆಗೊಳಿಸಿದೆ. ಆದರೆ, ವ್ಯಾಪಾರಿಗಳು ಹಸಿರು ಪಟಾಕಿಯನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಹಾಗೂ ಈ ಪಟಾಕಿಗಳ ಬಳಕೆ ಕುರಿತು ಪ್ರಚಾರ- ಜನಜಾಗೃತಿ ಮೂಡಿಸುವಲ್ಲಿ ಆಡಳಿತ ಕಾಳಜಿ ತೋರಿಸಿಲ್ಲ. ಹಾಗಾಗಿ ಈ ಬಾರಿ ಹಬ್ಬಕ್ಕೂ ಮಾಲಿನ್ಯಕಾರಕ ಹಳೆ ಪಟಾಕಿಯೇ ಗತಿಯಾಗಿದೆ.

ಬೆಳಕಿನ ಹಬ್ಬ ದೀಪಾವಳಿ ವೇಳೆ ಪಟಾಕಿಗಳ ಅಬ್ಬರದಿಂದ ವಾಯುಮಾಲಿನ್ಯದ ಜತೆಗೆ ಶಬ್ದಮಾಲಿನ್ಯದ ಪ್ರಮಾಣ ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗಾಗಿ ಹಬ್ಬವನ್ನು ವಾಯುಮಾಲಿನ್ಯ ರಹಿತವಾಗಿ ಆಚರಿಸಬೇಕೆಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರ ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ (ಸಿಎಸ್‌ ಐಆರ್‌) ಈ ಪಟಾಕಿಗಳನ್ನು ಅಭಿವೃದ್ಧಿಪಡಿಸಿ, ಪರಿಚಯಿಸಿದೆ. ಆದರೆ, ಪೂರ್ವ ಸಿದ್ಧತೆ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಎನ್ನಲಾಗಿದ್ದು, ಇದರಿಂದ ವ್ಯಾಪಾರಿಗಳು ಹೆಚ್ಚು ಉತ್ಸುಕತೆ ತೋರಿಲ್ಲ.

ಏನಿದು ಹಸಿರು ಪಟಾಕಿ: ನಗರದ ಹೃದಯ ಭಾಗವಾಗಿರುವ ಸಾಯಿ ಆದರ್ಶ ಪ್ರೌಢಶಾಲಾ ಆವರಣದಲ್ಲಿ ಪ್ರತಿ ವರ್ಷದಂತೆ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 30 ಅಂಗಡಿಗಳು ತಲೆ ಎತ್ತಿದ್ದು, ಯಾವೊಂದು ಅಂಗಡಿಯಲ್ಲಿಯೂ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಇಟ್ಟಿಲ್ಲ. ಎಲ್ಲೆಡೆ ಕೆಮಿಕಲ್‌ ಸಹಿತ ಬಣ್ಣ ಬಣ್ಣದ ಪಟಾಕಿಗಳೇ ರಾರಾಜಿಸುತ್ತಿವೆ. ಪರಿಸರವಾದಿಗಳು ಹೊಸ ಬಗೆಯ ಪಟಾಕಿಗಳ ಬಗ್ಗೆ ವಿಚಾರಿಸಿದರೆ ವ್ಯಾಪಾರಿಗಳಿಂದ ಇನ್ನೂ ನಮ್ಮ ಬಳಿ
ಬಂದಿಲ್ಲ ಎಂದು ಉತ್ತರ ಸಿಗುತ್ತಿದೆ.

ಕಡಿಮೆ ಬೆಳಕು, ಶಬ್ದವನ್ನು ಹೊರಸೂಸುವ ಪಟಾಕಿಯೇ ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ. ಇವು ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್‌ ಆಕ್ಸೈಡ್‌, ಸಲ್ಪರ್‌ ಡೈ ಆಕ್ಸೈಡ್‌ ಹೊರಚೆಲ್ಲುತ್ತದೆ. ಅಷ್ಟೇ ಅಲ್ಲ ಸಧ್ಯದ ಸಾಮಾನ್ಯ ಪಟಾಕಿಗೆ ಹೋಲಿಸಿದರೆ ಇದು ಶೇ. 30ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡುತ್ತದೆ ಎಂಬುದನ್ನು ಸಿಎಸ್‌ಐಆರ್‌ ಸಂಶೋಧನೆ ಮೂಲಕ ದೃಢಪಡಿಸಲಾಗಿದೆ.

Advertisement

ಪ್ರಚಾರ-ಜಾಗೃತಿಯೂ ಇಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಮಾರುಕಟ್ಟೆಗೆ ಪರಿಚಯಿಸುವ ದಿಸೆಯಲ್ಲಿ ಪೂರ್ವ ಸಿದ್ಧತಾ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕೆಲವೆಡೆ ಮಾತ್ರ ಹಸಿರು ಪಟಾಕಿಗಳು ಲಭ್ಯವಾಗಿವೆ. ದೀಪಾವಳಿ ಸಮೀಪಿಸಿದ್ದ ಕಾರಣ ಗೊಂದಲಕ್ಕೀಡಾದ ಸ್ಥಳೀಯ ವ್ಯಾಪಾರಿಗಳು ಹಳೆ ಪಟಾಕಿಗಳನ್ನು ಮಾರಾಟಕ್ಕೆ ತರುವಂತಾಗಿದೆ.

ಇತ್ತ ಮಾರುಕಟ್ಟೆಗೆ ಹಸಿರು ಪಟಾಕಿಗಳು ಬಂದಿಲ್ಲ. ಈ ಪಟಾಕಿಗಳ ಬಳಕೆ ಕುರಿತಂತೆ ಜಾಗೃತಿ ಮೂಡಿಸಬೇಕಾದ ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕಾಳಜಿ ತೋರಿಲ್ಲ. ಹಸಿರು ಪಟಾಕಿಗಳನ್ನು ಮಾರಾಟ ಮಾಡುವ ಬಗ್ಗೆ ಸಭೆಗಳ ಮೂಲಕ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿಲ್ಲ.

ಸರ್ಕಾರದ ಮುತುವರ್ಜಿ ನಡುವೆಯೂ ಈ ವರ್ಷ ದೀಪಗಳ ಹಬ್ಬವನ್ನು ಕೆಮಿಕಲ್‌ಯುಕ್ತ ಪಟಾಕಿಗಳೊಂದಿಗೆ ಆಚರಿಸುವಂತಾಗಿದೆ. ಬರುವ ವರ್ಷಗಳಲ್ಲಾದರೂ ಹಸಿರು ಪಟಾಕಿಗಳ ಬಳಕೆ ಹೆಚ್ಚಲಿ. ಇದಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಿ.

Advertisement

Udayavani is now on Telegram. Click here to join our channel and stay updated with the latest news.

Next