ಬೀದರ: ನಗರದ ಜಿಎನ್‌ಡಿ ಕಾಲೇಜಿನಲ್ಲಿ ಪಂತರತನ ಶಿರೋಮಣಿ ಸರದಾರ್ ಜೋಗಾಸಿಂಗ್ ಸ್ಮಾರಕ ಕ್ರೀಡಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್‌ಗೆ ಮಂಗಳವಾರ ಚಾಲನೆ ನೀಡಲಾಯಿತು.
ಪಾರಿವಾಳ ಹಾರಿ ಬಿಟ್ಟು, ಕ್ರೀಡಾಜ್ಯೋತಿ ಬೆಳೆಗಿಸುವ ಮೂಲಕ ಮೂರು ದಿನಗಳ ಕ್ರೀಡಾಕೂಟವನ್ನು ಆರಂಭಿಸಲಾಯಿತು. ರಾಜ್ಯದ ವಿವಿಧ 131 ಇಂಜಿನಿಯರಿಂಗ್ ಕಾಲೇಜುಗಳ 1,356 ಕ್ರೀಡಾಪಟುಗಳು ಈ ಮೀಟ್‌ನಲ್ಲಿ ಭಾಗವಹಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಡಾ| ಕರಿಸಿದ್ದಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಇದರಿಂದ ದೈಹಿಕ ಆರೋಗ್ಯ ಕಾಪಾಡುವುದಲ್ಲದೆ ಇತರೆ ಅನುಕೂಲಗಳೂ ಇವೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಜೀವನ ಕೌಶಲ್ಯ ಕಲಿತುಕೊಳ್ಳಬಹುದು. ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಬಗೆ ತಿಳಿಯುತ್ತದೆ. ಹೊಸ ಹೊಸ ಗೆಳೆಯರನ್ನು ಸಂಪಾದಿಸಬಹುದು ಎಂದು ಹೇಳಿದರು.
ಸೋಲು ಗೆಲುವುಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಸಮಯ ನಿರ್ವಹಣೆ ಮತ್ತು ಪರಿಶ್ರಮಗಳು ಕ್ರೀಡೆಯ ಭಾಗವಾಗಿರುವುದರಿಂದ ಕ್ರೀಡಾಪಟುಗಳು ಮತ್ತು ಕ್ರೀಡಾ ಆಸಕ್ತಿ ಹೊಂದಿದವರು ಹೆಚ್ಚು ಯಶಸ್ವಿಯಾಗಬಹುದು ಎಂದ ಅವರು, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು. ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಪಡೆಯಲು ಕ್ರೀಡೆ ನೆರವಾಗುತ್ತದೆ ಎಂದು ಹೇಳಿದರು.
ಅರ್ಜುನ್ ಪ್ರಶಸ್ತಿ ಪುರಸ್ಕೃತ ಕ್ಯಾ.ಭೀಮಸಿಂಗ್ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಐತಿಹಾಸಿಕ ಮಹತ್ವ ಇರುವ ನಗರದಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ವಿಶೇಷ ಎಂದು ಶ್ಲಾಘಿಸಿದರು.
ಜಿಎನ್‌ಡಿ ಕಾಲೇಜಿನ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿದರು. ಡಾ|ಬಲಬೀರಸಿಂಗ್ ಅಧ್ಯಕ್ಷತೆ ವಹಿಸಿದ್ದರು. ವಿಟಿಯು ಸೆನೆಟ್ ಸದಸ್ಯ ಡಾ| ಎಸ್.ಬಿ.ಕಿವಡೆ, ಕಾರ್ಯಕಾರಿ ಪರಿಷತ್ ಸದಸ್ಯ ವೀರಶೆಟ್ಟಿ ಮಣಗೆ, ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು, ಶೈಕ್ಷಣಿಕ ನಿರ್ದೇಶಕ ಬಿ.ಎಸ್. ಧಾಲಿವಾಲ್, ಕಾಲೇಜಿನ ಅಧ್ಯಾಪಕರು, ವಿವಿಧ ಕಾಲೇಜುಗಳ ಅಧ್ಯಾಪಕರು,
ಗಣ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ| ರವೀಂದ್ರ ಎಕಲಾರಕರ್ ಸ್ವಾಗತಿಸಿದರು. ರಾಜ್ಯದ ವಿವಿಧ ಭಾಗಗಳ ಕಾಲೇಜುಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಉದ್ಘಾಟನೆಗೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು.