ಬೀದರ: ಕೇಂದ್ರದ “ಉಡಾನ್’ ಯೋಜನೆಯಡಿ ಮೊದಲ ಹಂತದಲ್ಲೇ ಆಯ್ಕೆಯಾದರೂ ಲೋಹದ ಹಕ್ಕಿಗಳಲ್ಲಿ ಹಾರಾಡಬೇಕೆಂಬ ಜಿಲ್ಲೆಯ ಜನರ ದಶಕದ ಕನಸು ಮಾತ್ರ ನನಸಾಗಿಲ್ಲ. ವಾಯುಸೇನಾ ತರಬೇತಿ ಕೇಂದ್ರದ ನೆಲೆಯಾಗಿರುವ ಬೀದರನಲ್ಲಿ ವಿಮಾನಯಾನ ಆರಂಭಕ್ಕಾಗಿ ಸುಮಾರು 10 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಭೂಮಿ ಗುತ್ತಿಗೆ ಪಡೆದು ಮೂರು ಕೋಟಿ ವೆಚ್ಚದಲ್ಲಿ ಏರ್ ಟರ್ಮಿನಲ್ ನಿರ್ಮಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧತೆ, ಇಚ್ಛಾಶಕ್ತಿ ತೋರಿದ್ದರೆ “ಉಡಾನ್’ನಡಿ ರಾಜ್ಯದ ಮೊದಲ ವಿಮಾನ ಬೀದರನಿಂದಲೇ ಹಾರಾಡಬೇಕಿತ್ತು.
“ಉಡಾನ್’ನಡಿ ಮೈಸೂರು, ಬಳ್ಳಾರಿ ಮತ್ತು ಕಲಬುರಗಿಯಿಂದ ಈಗಾಗಲೇ ವಿಮಾನಯಾನ ಶುರುವಾದರೂ ಬೀದರನಲ್ಲಿ ಮಾತ್ರ ನನೆಗುದಿಗೆ ಬಿದ್ದಿದೆ. ಜಿಎಂಆರ್ ಒಪ್ಪಂದದ ವಿವಾದ: ಹೈದ್ರಾಬಾದ್ ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೀದರನ ಟರ್ಮಿನಲ್ ಕೇವಲ 150 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದರಿಂದ ಹೈದರಾಬಾದ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯು ವಿಮಾನ ಹಾರಾಟಕ್ಕೆ ಅಡ್ಡಗಾಲು ಹಾಕುತ್ತ ಬಂದಿದೆ.
“ಉಡಾನ್’ನಡಿ ಬೀದರ ಸೇರಿದ ಮೇಲೂ ಜಿಎಂಆರ್‌ನ ಒಪ್ಪಂದ ವಿವಾದ ಮಾತ್ರ ಬಗೆಹರಿದಿಲ್ಲ. ಈವರೆಗೂ ಮಾತುಕತೆಯ ಹಂತದಲ್ಲೇ ಇದೆ. ತಾಂತ್ರಿಕ ಸಮಸ್ಯೆ ಪರಿಹರಿಸುವ ಕುರಿತಂತೆ ಜಿಎಂಆರ್ ಮತ್ತು ರಾಜ್ಯ ಸರ್ಕಾರದ ನಡುವೆ ಒಪ್ಪಂದ ಕುರಿತು ಪತ್ರ ವ್ಯವಹಾರ ಆದ ಬಳಿಕವಷ್ಟೇ ಸಮಸ್ಯೆಗೆ ಇತಿಶ್ರೀ ಬೀಳಲಿದೆ.
ತಾಂತ್ರಿಕ ಕಾರಣ ಬಗೆಹರಿಸುವ ಜವಾಬ್ದಾರಿ ವಿಷಯದಲ್ಲಿ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಹೇಳಿಕೆ ನೀಡುತ್ತ ಬಂದಿವೆ. ಈಗ ಎರಡೂ ಕಡೆ ಬಿಜೆಪಿಯೇ ಅಧಿಕಾರದಲ್ಲಿದ್ದು, ವಿಮಾನ ಹಾರಾಟ ಶೀಘ್ರ ಆರಂಭ ಆಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಈವರೆಗೆ ಅಂಥ ಯಾವುದೇ ಪ್ರಯತ್ನಗಳು ನಡೆಯದಿರುವುದು ಬೀದರ ಜನರನ್ನು ಕೆರಳಿಸಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಹೊಂದಿಕೊಂಡ ಗಡಿ ಜಿಲ್ಲೆ ಬೀದರನಲ್ಲಿ ವಿಮಾನ ಹಾರಾಟ ಶುರುವಾದರೆ ಪ್ರವಾಸೋದ್ಯಮ ಬೆಳವಣಿಗೆ ಮತ್ತು ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚು ನೆರವಾಗಲಿದೆ. ಆದರೆ, ಈ ವಿಷಯದಲ್ಲಿ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ಮುತುವರ್ಜಿ ತೋರುತ್ತಿಲ್ಲ. ಹಿಂದೊಮ್ಮೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಜಿಎಂಆರ್ ಸಂಸ್ಥೆ, ರಕ್ಷಣಾ ಇಲಾಖೆ, ವಿಮಾನ ನಿಲ್ದಾಣಗಳ ಪ್ರಾಧಿ ಕಾರದ ಹಿರಿಯ ಅಧಿಕಾರಿಗಳ ತಂಡ ಟರ್ಮಿನಲ್‌ಗೆ ಭೇಟಿ ನೀಡಿತ್ತಾದರೂ ತಕರಾರು ಸಡಿಲಗೊಳಿಸುವಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ.
ಹಾಳು ಕೊಂಪೆಯಾದ ಟರ್ಮಿನಲ್: ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಏರ್ ಟರ್ಮಿನಲ್ ನಿರ್ಮಿಸಲಾಗಿದ್ದು, ಈಗ ಕಟ್ಟಡ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿದಿದೆ. ಕಸ್ಟಮ್ ಅಧಿಕಾರಿಗಳ ಹಾಲ್, ಟ್ರಾಫಿಕ್ ಆಪರೇಟರ್ ಕೊಠಡಿ, ವಿಶ್ರಾಂತಿ ಕೋಣೆ ಹೊಂದಿರುವ ಟರ್ಮಿನಲ್ ಸದ್ಯ ಭೂತ ಬಂಗಲೆಯಂತಾಗಿದೆ.
ಕಟ್ಟಡದ ಸುತ್ತಲೂ ಎದೆಯೆತ್ತರಕ್ಕೆ ಪೊದೆಗಳು ಬೆಳೆದುನಿಂತಿದೆ. ಕೊಠಡಿಗಳು ಅಸ್ಥಿ ಪಂಜರದಂತೆ ಬಾಯ್ತೆರೆದು ನಿಂತಿದ್ದು, ಜಂಗು ತಿಂದ ಬಾಗಿಲುಗಳು ಅನಾಥವಾಗಿ ತೆರೆದುಕೊಂಡಿವೆ. ಹಾಗಾಗಿ ಟರ್ಮಿನಲ್‌ಗಾಗಿ ಖರ್ಚು ಮಾಡಿದ್ದ ಕೋಟ್ಯಂತರ ರೂ. ನೀರಿಗೆ ಸುರಿದಂತಾಗಿದೆ.