Advertisement

ಸೌರ ವಿದ್ಯುತ್‌ ಪಾರ್ಕ್‌ಗೆ ಬೇಕು ಭೂಮಿ

04:00 PM Nov 08, 2019 | |

ಬೀದರ: ಜಿಲ್ಲೆಯಲ್ಲಿ ಸೌರ ವಿದ್ಯುತ್‌ ಪಾರ್ಕ್‌ ನಿರ್ಮಾಣಕ್ಕೆ ಜಮೀನು ಗುರುತಿಸುವ ಸಂಬಂಧ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ ಇಡಿಎಲ್‌) ಮತ್ತು ತಹಶೀಲ್ದಾರ್‌ ಅವರನ್ನು ಒಳಗೊಂಡ ಜಿಲ್ಲಾಡಳಿತದ ಜಂಟಿ ಸಭೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

Advertisement

ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಬಸವರಾಜು ಸೇರಿದಂತೆ ಬೀದರ, ಬಸವಕಲ್ಯಾಣ, ಹುಮನಾಬಾದ್‌, ಔರಾದ, ಭಾಲ್ಕಿ ಹಾಗೂ ಇನ್ನುಳಿದ ತಾಲೂಕುಗಳ ತಹಶೀಲ್ದಾರ್‌ ಅವರನ್ನೊಳಗೊಂಡ ಸಭೆಯಲ್ಲಿ ಜಮೀನು ಗುರುತಿಸುವ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಬಹುತೇಕ ಕೃಷಿ ಯೋಗ್ಯ ಭೂಮಿಯೇ ಇದೆ. ಅರಣ್ಯ ಪ್ರದೇಶ ಹೆಚ್ಚು ಪ್ರಮಾಣದಲ್ಲಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬರಡು ಭೂಮಿ ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು. ಎಲ್ಲ ತಹಸೀಲ್ದಾರರು ಕೂಡ ಇದೆ ರೀತಿ
ಅಭಿಪ್ರಯ ವ್ಯಕ್ತಪಡಿಸಿದರು.

10,000 ಎಕರೆ ಜಮೀನು: ಈ ವೇಳೆ ಮಾತನಾಡಿದ ಕೆಆರ್‌ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಬಸವರಾಜು ಅವರು, ಸೌರ ವಿದ್ಯುತ್‌ ಪಾರ್ಕ್‌ ನಿರ್ಮಿಸಲು ಅಂದಾಜು 10,000 ಎಕರೆಗಳಷ್ಟು ಖಾಸಗಿ ಜಮೀನನ್ನು 28 ರ್ವಗಳ ಕಾಲ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗುವುದು. ಪ್ರತಿ ಎಕರೆಗೆ ವಾರ್ಷಿಕ 21,500 ರೂ. ಮೊತ್ತವನ್ನು ರೈತರಿಗೆ ನೇರವಾಗಿ ನೀಡಲಾಗುವುದು. 2 ವರ್ಷಕ್ಕೊಮ್ಮೆ ಗುತ್ತಿಗೆ ದರವನ್ನು ಶೇ.5ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪಾರ್ಕ್‌ ನಿರ್ಮಾಣ ಹಂತದಲ್ಲಿ ರೈತರು ಮತ್ತು ಅವರ ಕುಟುಂಬದವರಿಗೆ ನೇರ ಅಥವಾ ಪರೋಕ್ಷವಾಗಿ ಅಂದಾಜು 8,000 ಉದ್ಯೋಗಗಳು ದೊರೆಯಲಿವೆ. ಪಾರ್ಕ್‌ ನಿರ್ಮಾಣದ ನಂತರ ಅಂದಾಜು 12,000 ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

Advertisement

ಈ ಯೋಜನೆಗೆ ಒಂದೇ ಕಡೆ ಭೂಮಿ ನೀಡಲು ಆಸಕ್ತಿಯುಳ್ಳ ರೈತರು ತಮ್ಮ ಒಪ್ಪಿಗೆಯನ್ನು ಲಿಖೀತವಾಗಿ ದಾಖಲೆಗಳೊಂದಿಗೆ ವಿವರಗಳನ್ನು ಕೆಆರ್‌ಇಡಿಸಿ ಅಥವಾ ಕೆಎಸ್‌ ಪಿಡಿಸಿಎಲ್‌ ಕಚೇರಿಗೆ ನೀಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ರೈತರೊಂದಿಗೆ ಸಭೆ ನಡೆಸಿ: ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಮಾತನಾಡಿ, ಎಲ್ಲ ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಬೇಕು. ಸಮೀಕ್ಷೆ ನಡೆಸಿ ಬಂಜರು ಭೂಮಿಯನ್ನು ಗುರುತಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರ ಸಭೆ ಕರೆದು ಅವರೊಂದಿಗೆ ಈ ಬಗ್ಗೆ ಚರ್ಚಿಸಬೇಕು. ಜಿಲ್ಲೆಯಲ್ಲಿ ಯಾವ ಕಡೆಗಳಲ್ಲಿ ಬರಡು ಭೂಮಿ ಇದೆ ಎಂಬುದನ್ನು ಗುರುತಿಸಬೇಕು. ಈ ಬಗ್ಗೆ ಕಡ್ಡಾಯವಾಗಿ ರೈತರ ಸಭೆ ಕರೆದು ಅವರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದೇ ಜಮೀನು ನೀಡುವ ಬಗ್ಗೆ ಖಾತ್ರಿ ಪಡಿಸಬೇಕು ಎಂದು ತಹಶೀಲ್ದಾರರಿಗೆ ತಿಳಿಸಿದರು.

ತಮ್ಮ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂಜರು ಭೂಮಿ ಇದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ತಿಳಿಸುವುದಾಗಿ ತಹಶೀಲ್ದಾರರು ಪ್ರತಿಕ್ರಿಯಿಸಿದರು.

ಸಭೆಯಲ್ಲಿ ತಹಶೀಲ್ದಾರರಾದ ಚಂದ್ರಶೇಖರ ಎಂ., ಕೀರ್ತಿ ಚಾಲಕ್‌, ಸಾವಿತ್ರಿ ಸಲಗರ್‌, ಅಣ್ಣಾರಾವ್‌ ಪಾಟೀಲ, ನಾಗಯ್ಯ ಹಿರೇಮಠ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next