Advertisement

ಬಸವ ಸಂಸ್ಕೃತಿ ಪಸರಿಸಿದ ಶರಣ ಮೇಳ

06:23 PM Dec 30, 2019 | Naveen |

ಬೀದರ: ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳವು ಬಸವ ಸಂಸ್ಕೃತಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿದೆ ಎಂದು ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ನುಡಿದರು.

Advertisement

ನಗರದ ಎಂ.ಎಸ್‌. ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ಶರಣ ಮೇಳ ಪ್ರಚಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಸವ ತತ್ವ ಪ್ರಚಾರ ಹಾಗೂ ಪ್ರಸಾರಕ್ಕಾಗಿಯೇ ಬದುಕು ಸವೆಸಿದ್ದ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರು ದೂರದೃಷ್ಟಿ ಇಟ್ಟುಕೊಂಡು ಆರಂಭಿಸಿದ ಶರಣ ಮೇಳ ಈಗ ಶರಣ ಸಂಸ್ಕೃತಿಯ ಅತಿದೊಡ್ಡ ಮೇಳವಾಗಿದೆ. 32 ಶರಣ ಮೇಳಗಳು ಈವರೆಗೆ ಯಶಸ್ವಿಯಾಗಿ ನೆರವೇರಿದ್ದು, ಜ. 11
ರಿಂದ 15ರ ವರೆಗೆ ನಡೆಯಲಿರುವ 33ನೇ ಶರಣ ಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಶರಣ ಮೇಳದಲ್ಲಿ ಐದು ದಿನಗಳ ಕಾಲ ವಿವಿಧ ಗೋಷ್ಠಿಗಳು ಜರುಗಲಿವೆ. ಜನಪ್ರತಿನಿ ಧಿಗಳು, ಮಠಾಧಿಧೀಶರು, ಚಿಂತಕರು, ಗಣ್ಯರು ಭಾಗವಹಿಸಲಿದ್ದಾರೆ. ಲಕ್ಷಾಂತರ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ ಮಾತೆ, ಮುಸ್ಲಿಮರಿಗೆ ಮಕ್ಕಾ, ಕ್ರೈಸ್ತರಿಗೆ ಜೇರುಸಲೇಂ, ಸಿಖ್ಕರಿಗೆ ಅಮೃತಸರ ಇರುವಂತೆ ಲಿಂಗಾಯತ ಧರ್ಮಿಯರಿಗೆ ಕೂಡಲಸಂಗಮ ಪವಿತ್ರ ಕ್ಷೇತ್ರವಾಗಿದೆ. ಹೀಗಾಗಿ ಬಸವ ಭಕ್ತರು ವರ್ಷಕ್ಕೆ ಒಮ್ಮೆಯಾದರೂ ಕೂಡಲಸಂಗಮಕ್ಕೆ ಭೇಟಿ ಕೊಡಬೇಕು. ಶರಣರ ಮೇಳದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಷಟ್‌ಸ್ಥಲ ಧ್ವಜಾರೋಹಣ ಮಾಡಿದ ಸಂಸದ ಭಗವಂತ ಖೂಬಾ ಮಾತನಾಡಿ, ಮಾತೆ ಮಹಾದೇವಿ ಅವರು ಬಸವ ತತ್ವವನ್ನು ಪ್ರತಿ ಮನೆ, ಮನಕ್ಕೂ ತಲುಪಿಸಲು ಅವಿರತ ಶ್ರಮಿಸಿದ್ದರು. ಬಸವ ತತ್ವ ನಿಷ್ಠರನ್ನು ತಯಾರು ಮಾಡಿದ್ದರು. ಬಸವ ತತ್ವವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸುವಲ್ಲಿ ಅವರ ಕೊಡುಗೆ ಬಹುದೊಡ್ಡದಾಗಿದೆ. ಶರಣ ಮೇಳದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಬಸವ ಧರ್ಮ ಪೀಠ ವಹಿಸುವ ಜವಾಬ್ದಾರಿಯನ್ನು ವಿನಯಪೂರ್ವಕ ನಿರ್ವಹಿಸುತ್ತೇನೆ
ಎಂದು ಹೇಳಿದರು.

ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಕೂಡಲಸಂಗಮ ಬಸವಣ್ಣನವರ ಐಕ್ಯಕ್ಷೇತ್ರ ಎನ್ನುವ ಪರಿಚಯ ಬಹುತೇಕರಿಗೆ ಆದದ್ದೇ ಶರಣ ಮೇಳ ಕಾರ್ಯಕ್ರಮದಿಂದಾಗಿ. ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರು ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಿದ್ದರು. ಬಸವಾದಿ ಶರಣ ತತ್ವಗಳ ಪ್ರಚಾರ ಮಾಡಿದ್ದರು.
ಕೂಡಲಸಂಗಮದಲ್ಲಿ ಶರಣ ಮೇಳ ಹಾಗೂ ಬಸವಕಲ್ಯಾಣದಲ್ಲಿ
ಕಲ್ಯಾಣ ಪರ್ವ ಕಾರ್ಯಕ್ರಮಗಳನ್ನು ಬೃಹತ್‌ ಪ್ರಮಾಣದಲ್ಲಿ ಆಯೋಜಿಸುತ್ತ ಬಸವಣ್ಣನವರ ಸಂದೇಶಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಿದರು. ಈ ಮೂಲಕ ಬಸವಣ್ಣನವರ ಐಕ್ಯಕ್ಷೇತ್ರ ಹಾಗೂ ಕಾರ್ಯಕ್ಷೇತ್ರದೊಂದಿಗೆ ಬಸವಭಕ್ತರ ಸಂಬಂಧವನ್ನೂ ಗಟ್ಟಿಗೊಳಿಸಿದ್ದರು ಎಂದು ಹೇಳಿದರು.

Advertisement

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಕೇಂದ್ರದಿಂದಲೂ ಅನುದಾನ ಒದಗಿಸಲು ಹಾಗೂ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಕಲ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.

ಸಿದ್ಧರಾಮೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೆ ಸತ್ಯದೇವಿ, ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್‌ ಪಾಟೀಲ, ಎನ್‌ಎಸ್‌ಎಸ್‌ಕೆ ಉಪಾಧ್ಯಕ್ಷ ಕಾಶಪ್ಪ ಧನ್ನೂರ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಮುಖಂಡರಾದ ಶಿವರಾಜ ಪಾಟೀಲ ಅತಿವಾಳ, ರಾಜೇಂದ್ರ ಜೊನ್ನಿಕೇರಿ, ಡಾ| ಮಹೇಶ ಬಿರಾದಾರ, ಶಂಕರೆಪ್ಪ ಪಾಟೀಲ ಜಹೀರಾಬಾದ್‌, ಶ್ರೀಕಾಂತ ಬೋರಾಳೆ, ಕಿರಣ ಖಂಡ್ರೆ, ವೀರಶೆಟ್ಟಿ ಪಟೆ°, ಶಾಂತಾ ಬಿರಾದಾರ, ಮೇನಕಾ ಪಾಟೀಲ ಮೊದಲಾದವರು ಇದ್ದರು. ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next