Advertisement
ಕಳೆದ 2007ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ (ಕೆಬಿಜಿಎನ್‌ಎಲ್) ಔರಾದ ತಾಲೂಕು ಹಾಲಹಳ್ಳಿ ಬಳಿ ಮಾಂಜ್ರಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಮೂಲಕ ಔರಾದ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ‌್ವತವಾಗಿ ಬಗೆಹರಿಯಬಹುದು ಎಂದು ಈ ಭಾಗದ ಜನರು ನಿರೀಕ್ಷಿಸಿದ್ದರು. ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಔರಾದ ತಾಲೂಕಿನ ಜನರು ಗಂಭೀರ ಸಮಸ್ಯೆ ಎದುರಿಸುತಿದ್ದಾರೆ.
Related Articles
Advertisement
ತಾಂತ್ರಿಕ ವೈಫಲ್ಯ: ತಾಂತ್ರಿಕ ವೈಫಲ್ಯದಿಂದಾಗಿ ನೀರು ತಡೆಯುವಲ್ಲಿ ಬ್ಯಾರೇಜ್‌ನ ಗೋಡಬಾಲೆ ಗೇಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಳೆ ನೀರನ್ನು ಸರಾಗವಾಗಿ ಗೇಟ್ ಆಚೆಗೆ ಚೆಲ್ಲುತ್ತಿವೆ. ಹಾಗಾಗಿ ಬೇಸಿಗೆ ಮುನ್ನವೇ ಬ್ಯಾರೇಜ್ ಖಾಲಿಯಾಗುತ್ತಿದೆ. ಮಳೆ ದಿನಗಳಲ್ಲಿ ಹರಿದುಬರುವ ನೀರು ನಿಗದಿತ ಪ್ರಮಾಣದಲ್ಲಿ ನಿಂತು ಹೆಚ್ಚಾದ ನೀರು ಗೇಟ್ ಮೇಲಿಂದ ಹರಿಯಬೇಕು. ಆದರೆ, ಮಳೆಗಾಲದಲ್ಲಿ ಬರುವ ನೀರು ಗೇಟ್ ಕೆಳಗಡೆಯಿಂದಲೂ ಹರಿದು ಹೋಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಪೈಪ್‌ಲೈನ್-ಟ್ಯಾಂಕ್ ನಿರ್ಮಾಣ: ಹಾಲಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಆರಂಭವಾದ ನಂತರ ಶಾಶ್ವ್ವತ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ನಂಬಿರುವ ವಿವಿಧ ಗ್ರಾಪಂ ಹಾಗೂ ಔರಾದ ಪಪಂ ಕ್ರಿಯಾ ಯೋಜನೆ ತಯಾರಿಸಿ ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ವಿವಿಧ ಗ್ರಾಮಗಳಲ್ಲಿ ಹಾಗೂ ಔರಾದ ಪಟ್ಟಣದವರೆಗೆ ಪೈಪ್‌ಲೈನ್ ಅಳವಡಿಸಲಾಗಿದೆ. ನೀರು ಶೇಖರಣೆಗೆ ವಿವಿಧೆಡೆ ಟ್ಯಾಂಕ್ ಸಹ ನಿರ್ಮಿಸಲಾಗಿದೆ. ಆದರೆ, ಇಂದಿಗೂ ಹನಿ ನೀರು ಬಾರದಿರುವುದು ಔರಾದ ತಾಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಕಾರಣಿಗಳು ಮೌನ: ಔರಾದ ತಾಲೂಕು ಕುಡಿಯುವ ನೀರಿಗಾಗಿ ಪದೇ ಪದೇ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು ಕೂಡ ರಾಜಕಾರಣಿಗಳು ಯಾವ ಕಾರಣಕ್ಕೆ ಹಾಲಹಳ್ಳಿ ಬ್ಯಾರೇಜ್ ಬಗ್ಗೆ ಮಾತಾಡುತ್ತಿಲ್ಲ. ಕಾರಂಜಾ ಜಲಾಶಯದಿಂದ ನೀರು ನೀಡಿ ಎಂದು ಪತ್ರ ಬರೆಯುತ್ತಾರೆ. ಆದರೆ ಆ ನೀರು ಎಲ್ಲಿ ಸಂಗ್ರಹಿಸುತ್ತಾರೆ ಎಂಬ ಆಲೋಚನೆ ಕೂಡ ಅವರಿಗೆ ಇಲ್ಲವೇ? ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಯಿಲ್ಲಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಎಷ್ಟು ಖರ್ಚಾಗಿದೆ? ಯೋಜನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಗೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಭೀಮರಾಯನಗುಡಿಯಲ್ಲಿರುವ ಇಲಾಖೆಗೆ ಸಂಪರ್ಕಿಸಬೇಕು. ಆದರೆ, ಸದ್ಯ ಕಾಮಗಾರಿ ನಡೆಯುತ್ತಿದ್ದು, ಮೇ ತಿಂಗಳ ಅಂತ್ಯದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆೆ. ಈ ವರ್ಷದ ಮಳೆಗಾಲದಲ್ಲಿ ಮಳೆ ನೀರು ನಿಲ್ಲುವ ವಿಶ್ವಾಸವಿದೆ.
•ಮಾರುತಿ ಗಾಯಕವಾಡ,
ಎಇಇ ಕೆಬಿಜೆಎನ್‌ಎಲ್