ಬೀದರ: ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುತ್ತ ಅಕ್ಷರ ಕಲಿತು ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಸಮಾಜ ಸುಧಾರಣೆ ಮಾಡಿದವರು ಸಾವಿತ್ರಿಬಾಯಿ ಫುಲೆ. ಇಂದಿಗೂ ಮಹಿಳಾ ಸಮಾಜಕ್ಕೆ ಸ್ಫೂರ್ತಿ, ಶಕ್ತಿಯಾಗಿ ನಿಂತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫುಲೆ ಅವರ ಮಾರ್ಗದರ್ಶನ, ತತ್ವ-ಸಿದ್ಧಾಂತವನ್ನು ಪ್ರತಿಯೊಬ್ಬ ಮಹಿಳೆ ಅನುಸರಿಸಬೇಕು ಎಂದು ಕರೆ ನೀಡಿದರು.
ಸಾಹಿತಿ ಎಂ.ಜಿ. ಗಂಗನಪಳ್ಳಿ ಮಾತನಾಡಿ, ಕನ್ನಡ ನಾಡಿನಿಂದ ವಿಶ್ವಕ್ಕೆ ಸರ್ವಶ್ರೇಷ್ಠ ಸಾಹಿತ್ಯವನ್ನು ಕುವೆಂಪು ಕೊಟ್ಟಿದ್ದಾರೆ ಎಂದರು. ಕಲಾವಿದ ಶಂಭುಲಿಂಗ ವಾಲದೊಡ್ಡಿ ಮಾತನಾಡಿ, ಸಮಾಜಕ್ಕೆ ಅಂಟಿಕೊಂಡಿರುವ ಸಮಸ್ಯೆಗಳ ಮೇಲೆ ಸಾಹಿತಿಗಳಾದವರು ತಮ್ಮ ಬರಹಗಳ ಮೂಲಕ ಬೆಳಕು ಚೆಲ್ಲಬೇಕು ಎಂದು ಹೇಳಿದರು.
ವಿಜಯಕುಮಾರ ಪಾಟೀಲ ಮಾತನಾಡಿ, ಉತ್ತಮ ಪರಿಸರ ನಿರ್ಮಾಣಕ್ಕೆ ಮನೆಗೊಂದು ಮರ ಬೆಳೆಸುವ ಕಾರ್ಯಕ್ರಮ ನಡೆಯಬೇಕು. ಇಲ್ಲವಾದಲ್ಲಿ ಮನುಷ್ಯನ ಜೀವನಕ್ಕೆ ಅಪಾಯ ಇದೆ ಎಂದರು.
ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರತ್ವ 1950ರಲ್ಲಿಯೇ ಸಮಸ್ತ ಭಾರತೀಯರಿಗೆ ದೊರೆತಿದೆ. ಸಂವಿಧಾನದ ಸಮಕ್ಷಮದಲ್ಲಿ ಸರ್ವರಿಗೂ ಸಮಾನತೆ, ಸರ್ವರಿಗೂ ಸಮಾನ ರಕ್ಷಣೆ ಇದೆ. ಇಂದಿನ ಬಡತನ, ನಿರುದ್ಯೋಗ, ವಸತಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಯುವಜನಾಂಗದ ಅಸಮಾನತೆ ನಿರ್ಮೂಲನೆಗೆ ಸರ್ಕಾರ ಯೋಚಿಸಬೇಕು ಎಂದು ಒತ್ತಾಯಿಸಿದರು.
ಡಾ| ಎಸ್.ಎಲ್. ದಂಡಿನ್, ಡಾ|ಸಂಜೀವ ಕುಮಾರ ಅತಿವಾಳೆ, ಮಹೇಶ ಸಜ್ಜನ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತ ಅಸ್ಕರ ಫಾತೀಮಾ, ನೇಹಾ ಬೇಗಂ, ಅನುರಾಧ ಪ್ರಕಾಶ, ಶೃತಿ, ಸಪ್ನಾ ಜಗದೀಶ, ಶಿವಾನಿ, ರಾಣಿ ನಾಗಶೆಟ್ಟಿ, ಐಶ್ವರ್ಯರಾಯ್ ಹಾಗೂ 25 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಪ್ರೊ| ಬಬಚೇಡಿ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಸುಂದರರಾಜ ನಿರೂಪಿಸಿದರು. ಡಾ| ಭೀಮಸೇನ ಸ್ವಾಗತಿಸಿದರು ಪ್ರೊ| ಸಂಜೀವಕುಮಾರ ಅಪ್ಪೆ ವಂದಿಸಿದರು.