Advertisement

ಗ್ರಾಮೀಣ ಲೈಬ್ರರಿಗಳು ಅವ್ಯವಸ್ಥೆ ಆಗರ

11:08 AM Oct 25, 2019 | |

ಬೀದರ: ಸಾಮಾನ್ಯ ಜನರಲ್ಲಿ ಓದುವ ಅಭ್ಯಾಸದ ಅಭಿವೃದ್ಧಿಗೆ ಆಸಕ್ತಿ ಬೆಳೆಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ನಗರ, ಪಟ್ಟಣ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ, ಜನರನ್ನು ಸುಜ್ಞಾನದೆಡೆ ಕರೆದೊಯ್ಯಬೇಕಾದ ಗ್ರಂಥಾಲಯಗಳು ಅಗತ್ಯ ಸೌಲಭ್ಯಗಳಿಲ್ಲದೆ ನರಳುತ್ತಿದ್ದು, ಓದುಗರಿಂದ ದೂರ ಉಳಿಯುತ್ತಿವೆ.

Advertisement

ಗ್ರಂಥಾಲಯಗಳು ಜ್ಞಾನ ವಿಕಾಸಕ್ಕೆ ಪ್ರೇರಣಾದಾಯಕವಾಗಿವೆ. ಆದರೆ, ಈಚೆಗೆ ಶ್ರೀಸಾಮಾನ್ಯರಿಗೆ ವಿಶ್ವವಿದ್ಯಾಲಯ ಎನಿಸಿಕೊಳ್ಳಬೇಕಾಗಿದ್ದ ಲೈಬ್ರರಿಗಳು ಮೂಲಭೂತ ಸಮಸ್ಯೆಗಳಿಂದ ನರಳುತ್ತಿದ್ದು, ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಪುಸ್ತಕ ಪ್ರಿಯರಿಂದ ಕಡೆಗಣಿಸಲ್ಪಡುತ್ತಿವೆ.

ಮೊಬೈಲ್‌, ಅಂತರ್ಜಾಲದತ್ತ ಮುಖ ಮಾಡಿರುವ ಪರಿಣಾಮ ಓದುವ ಸಂಸ್ಕೃತಿ ಕ್ಷಿಣಿಸುತ್ತಿರುವ ಸಮಯದಲ್ಲಿ ಓದುಗರನ್ನು ತನ್ನತ್ತ ಸೆಳೆಯಬೇಕಾದ ಲೈಬ್ರರಿಗಳು ಪುಸ್ತಕ ಪ್ರಿಯರ ಸಮಸ್ಯೆಗೆ ಸ್ಪಂದಿಸದೇ ಕಡೆಗಣಿಸುತ್ತಿರುವುದು ವಿಪರ್ಯಾಸ.

ಜಿಲ್ಲಾ ಕೇಂದ್ರ ಬೀದರನಲ್ಲಿ 1976ರಲ್ಲಿ ಕೇಂದ್ರ ಗ್ರಂಥಾಲಯ ಹಾಗೂ 2009ರಲ್ಲಿ ನಗರ ಕೇಂದ್ರ ಗ್ರಂಥಾಲಯ ಕೇಂದ್ರ ಸ್ಥಾಪಿಸಲಾಗಿತ್ತು. ನಂತರ ಭಾಲ್ಕಿ, ಬಸವಕಲ್ಯಾಣ, ಔರಾದ, ಹುಮನಾಬಾದ ಮತ್ತು ಚಿಟಗುಪ್ಪದಲ್ಲಿ ಶಾಖಾ ಗ್ರಂಥಾಲಯ ಆರಂಭಿಸಿದ್ದರೆ 180 ಗ್ರಾಪಂ ಕೇಂದ್ರಗಳಲ್ಲಿ ಲೈಬ್ರರಿಗಳು ಕಾರ್ಯಾರಂಭ ಮಾಡಿವೆ.

ಗ್ರಂಥಾಲಯಗಳಲ್ಲಿ ಪುಸ್ತಕಗಳ ಅಲಭ್ಯತೆ, ಸ್ವಂತ ಕಟ್ಟಡ, ಮತ್ತು ಓದುಗರಿಗೆ ಮೂಲಭೂತ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳ
ಆಗರವಾಗಿರುವ  ಹಿನ್ನೆಲೆಯಲ್ಲಿ ಓದುಗರು ಅತ್ತ ಭೇಟಿ ನೀಡುವುದು ವಿರಳರಾಗುತ್ತಿದೆ.

Advertisement

ಗ್ರಂಥಾಲಯಕ್ಕೆ ಪ್ರತಿ ನಿತ್ಯ ವಿದ್ಯಾರ್ಥಿ ಸಮೂಹ ಜ್ಞಾನಾರ್ಜನೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವುದಕ್ಕೆ ಹಲವಾರು ನಿರುದ್ಯೋಗಿ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ದಿನ ಪತ್ರಿಕೆ ಓದಲು ಬರುತ್ತಾರೆ. ವೃದ್ಧರು ಓದುವಿನ ಮೂಲಕ ಸಮಯ ಕಳೆಯಲು ಆಗಮಿಸುತ್ತಾರೆ. ಈ ರೀತಿ ಬಂದ ಓದುಗರು ಆರಾಮಾಗಿ ಕುಳಿತು ಓದಲು ಸರಿಯಾದ ಆಸನದ ವ್ಯವಸ್ಥೆ ಇಲ್ಲ. ಓದುಗರ ಸಂಖ್ಯೆಗನುಗುಣವಾದ ಸ್ಥಳವಕಾಶವು ಇಲ್ಲ. ತಮಗೆ ಬೇಕಾದ ಪುಸ್ತಕಗಳು ಲಭ್ಯ ಇಲ್ಲ. ಇದರೆಲ್ಲರ ಜತೆಗೆ ಶೌಚಾಲಯವು ಇಲ್ಲದೆ ಪರಿತಪಿಸುವಂತಾಗಿದೆ. ಜಿಲ್ಲೆಯ ಬಸವಕಲ್ಯಾಣ ಮತ್ತು ಹುಮನಾಬಾದನಲ್ಲಿ ಶಾಖಾ ಗ್ರಂಥಾಲಯಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಇನ್ನುಳಿದ ಭಾಲ್ಕಿ, ಔರಾದ ಮತ್ತು ಚಿಟಗುಪ್ಪದಲ್ಲಿ ಲೈಬ್ರರಿಗೆ ಸ್ವಂತ ಸೂರು ಇಲ್ಲವಾಗಿದೆ. ಓದುಗರಿಗೆ ಅಗತ್ಯವಾಗಿರುವ ಕುಡಿಯುವ ನೀರು ಮತ್ತು ಶೌಚಾಲಯ ದೊಡ್ಡ ಸಮಸ್ಯೆಯಾಗಿದ್ದು, ಮಹಿಳೆಯರ ಪರಿಸ್ಥಿತಿ ಹೇಳ ತೀರದಂತಾಗಿದೆ.
ಇನ್ನೂ ಗ್ರಾಮೀಣ ಪ್ರದೇಶದಲ್ಲಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುವುದು ಸಾಹಿತ್ಯಾಸಕ್ತರಲ್ಲಿ ಆಕ್ರೋಶ ಹೆಚ್ಚಿದೆ.

ಗ್ರಾಮಾಂತರ ಪ್ರದೇಶದಲ್ಲಿ 180 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ಇತ್ತೀಚೆಗೆ ಗ್ರಾಪಂಗೆ ವಹಿಸಿದೆ. ಕೆಲವೆಡೆ ಮಾತ್ರ ಸ್ವಂತ ಕಟ್ಟಡಗಳಿದ್ದು, ಅವೂ ಸುಭದ್ರವಾಗಿಲ್ಲ. ಸುಣ್ಣ-ಬಣ್ಣ ಕಾಣದೆ ಹಲವು ವರ್ಷಗಳಾಗಿವೆ. ಈ ಲೈಬ್ರರಿಗಳಲ್ಲಿ ಅಗತ್ಯ ಸೌಲಭ್ಯಗಳ ಜತೆಗೆ ಸಿಬ್ಬಂದಿ ಕೊರತೆ ಪ್ರಮುಖವಾಗಿದೆ.

ಈವರೆಗೆ ಕಾಯಂ ಸಿಬ್ಬಂದಿ ನೇಮಕ ಮಾಡಿಲ್ಲ. ಗೌರವ ಸಂಭಾವನೆ ಆಧಾರದಲ್ಲಿ ಮೇಲ್ವಿಚಾರಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಮನಬಂದಂತೆ ವರ್ತಿಸುವ ಸಿಬ್ಬಂದಿ ಗ್ರಂಥಾಲಯಗಳ ಬಾಗಿಲು ತೆರೆಯುವುದು ಅಪರೂಪ ಎಂಬಂತಾಗಿದೆ. ಜ್ಞಾನದ ಹಸಿವು ನೀಗಿಸುವ ಗ್ರಂಥಾಲಯದಂಥ ಮುಕ್ತ ಸಾರ್ವಜನಿಕ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಿಕೊಂಡು ಅಭಿವೃದ್ಧಿಪಡಿಸಬೇಕಿದೆ. ಓದುಗರ ಆಸಕ್ತಿಯಂತೆ ಅಗತ್ಯ ಕಲಿಕಾ ಸೌಲಭ್ಯ, ಮೂಲ ಸವಲತ್ತು ಒದಗಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next