Advertisement

80 ವರ್ಷದವರಿಗೆ ಶೇ.20 ಹೆಚ್ಚುವರಿ ಪಿಂಚಣಿಗೆ ಆದೇಶ

05:13 PM Aug 28, 2019 | Naveen |

ಬೀದರ: 80 ವರ್ಷದ ಪಿಂಚಣಿದಾರರಿಗೆ ಶೇ.20ರಷ್ಟು ಹೆಚ್ಚುವರಿ ಪಿಂಚಣಿ ನೀಡಲು ಬ್ಯಾಂಕ್‌ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೇ ಸುತ್ತೋಲೆ ಪ್ರಕಾರ ಹುಟ್ಟಿದ ದಿನಾಂಕ, ಮತದಾರರ ಗುರುತಿನ ಚೀಟಿ ನೀಡಬೇಕು. ಒಂದೇ ಬಾರಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ವಯೋಮಿತಿ ಆಧಾರದ ಮೇಲೆ ಪ್ರತಿ ವರ್ಷ ನಿಗದಿಯಂತೆ ಪಿಂಚಣಿ ನೀಡಬೇಕು ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಪಿಂಚಣಿದಾರ ಪ್ರಭುಲಿಂಗ ಸ್ವಾಮಿ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಪಿಂಚಣಿ ಪಡೆಯುತ್ತಿದ್ದು, ಲೈಫ್‌ ಸರ್ಟಿಫಿಕೇಟ್ ನವೆಂಬರ್‌ನಲ್ಲಿ ನೀಡಬೇಕಿತ್ತು. ನೆನಪಿನ ಶಕ್ತಿ ಕಡಿಮೆಯಾಗಿರುವ ಪ್ರಯುಕ್ತ ಈ ಪ್ರಮಾಣ ಪತ್ರವನ್ನು ನೀಡಿಲ್ಲ. ಅದಕ್ಕೆ ನನ್ನ ಪಿಂಚಣಿ ಸ್ಥಗಿತಗೊಂಡಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.

ಈಗಾಗಲೇ ಪಿಂಚಣಿ ಪಡೆಯುತ್ತಿದ್ದೇನೆ. ಆದರೆ 2015ರ ಅಕ್ಟೋಬರ್‌ 9ರಿಂದ 2016ರ ಮೇ 24ರ ವರೆಗೆ ಕಡ್ಡಾಯ ನಿರೀಕ್ಷಣಾ ಅವಧಿ ಸಕ್ರಮಗೊಂಡಿಲ್ಲ ಎಂದು ಶಿವರಾಜ ಸ್ವಾಮಿ ತಿಳಿಸಿದರು.

ಪಂಢರಿನಾಥ ಪೊಲೀಸ್‌ ಪಾಟೀಲ್ ಮಾತನಾಡಿ, ಅಂಗವಿಕಲ ಭತ್ಯೆ ಪಿಂಚಣಿಯಲ್ಲಿ ಸೇರಿಸಿ ಮಂಜೂರು ಮಾಡಬೇಕು ಎಂದು ಕೋರಿದರು. ಶಿವಲಿಂಗಪ್ಪಾ ಬಿರಾದಾರ ಅವರು, ಪಿಪಿಒ ಆದೇಶದಲ್ಲಿ ಹುಟ್ಟಿದ ದಿನಾಂಕ, ನಿವೃತ್ತಿ ದಿನಾಂಕ ಮತ್ತು ಪಿಪಿಒ ಸಂಖ್ಯೆ ತಪ್ಪಾಗಿರುತ್ತದೆ. 1993ರ ಜುಲೈ 1ಕ್ಕೂ ಮುಂಚೆ ನಿವೃತ್ತಿ ಹೊಂದಿದ್ದು, 85 ವರ್ಷದ ಸೌಲಭ್ಯ ನೀಡಿರುವುದಿಲ್ಲ ಎಂಬ ಅಹವಾಲು ಸಲ್ಲಿಸಿದರು.

Advertisement

ಜಿಲ್ಲಾ ಖಜಾನೆ ಅಧಿಕಾರಿ ಅಶೋಕ ವಡಗಾವೆ ಮಾತನಾಡಿ, ಪಿಂಚಣಿ ಪುಸ್ತಕ ಕಳೆದು ಹೋಗಿದೆ ಕೊಡಿ ಎಂದು ಕೆಲವರು ಖಜಾನೆಗೆ ಬಂದು ಕೇಳುತ್ತಾರೆ. ಆದರೆ ಈ ಪುಸ್ತಕದ ಎರಡು ಪ್ರತಿಗಳು ಖಜಾನೆ ಮತ್ತು ಬ್ಯಾಂಕಿನಲ್ಲಿ ಮಾತ್ರ ಇರುತ್ತವೆ. ಆದ್ದರಿಂದ ತಾವೇ ಪಿಂಚಣಿದಾರರು ಎಂದು ದೃಢೀಕರಿಸಿ ಅದರ ನಕಲು ಪ್ರತಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ಖಜಾನೆ ಇಲಾಖೆಗೆ ನೀಡಿದರೆ ಅದನ್ನು ಎಜಿ ಅವರಿಗೆ ಕಳುಹಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಿಪಿಎಫ್‌ ಪಿಂಚಣಿ ಹೆಚ್ಚಿಸಬೇಕು. ತಾತ್ಕಾಲಿಕ ಪಿಂಚಣಿ ನೀಡಬೇಕು. ಪರಿಷ್ಕೃತ ಪಿಂಚಣಿ ಬಾಕಿ ಮಂಜೂರು ಮಾಡಬೇಕು. ಸ್ವಯಂ ಚಾಲಿತ ವೇತನ ಮಂಜೂರು ಮಾಡಬೇಕು. 6ನೇ ವೇತನ ಆಯೋಗದಲ್ಲಿ ಆದ ತಾರತಮ್ಯ ಸರಿಪಡಿಸಬೇಕು. ಪಿಂಚಣಿಯಲ್ಲಿ ಕಡಿತಗೊಳಿಸಿರುವುದು ಹೀಗೆ ನಾನಾ ರೀತಿಯ ಅಹವಾಲುಗಳು ಸಲ್ಲಿಕೆಯಾದವು.

ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ ಅಸನೂರಕರ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಿ.ಎಂ.ಕಮತಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಶಿವಕುಮಾರ ಸ್ವಾಮಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್‌.ಬಿ. ಕುಚಬಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next