ಬೀದರ: ಆಟೋ ಚಾಲಕರು, ಕ್ರೂಸರ್, ಗೂಡ್ಸ್ ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಆಯಾ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ನಿಯಮ ಉಲ್ಲಂಘಿಸಿದ ವಾಹನಗಳ ಪರಮಿಟ್(ಆರ್‌ಸಿ) ಹಾಗೂ ವಾಹನ ಚಾಲನೆ ಪತ್ರ (ಡಿಎಲ್) ರದ್ದು ಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಸೂಚಿಸಿದರು.
ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ರಿಟ್ ಪೆಟಿಷನ್ ಕುರಿತು ಚರ್ಚೆ ನಡೆಸಿದರು.
ಆಟೋ ಚಾಲಕರು ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಬಾರದು. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಆಟೋಗಳಲ್ಲಿ 6ಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸಬಾರದು. ಪ್ರತಿಯೊಂದು ಆಟೋ ಚಾಲಕರು ತಮ್ಮ ಆಟೋದ ವಿಮೆಯನ್ನು ಕಡ್ಡಾಯವಾಗಿ ಹೊಂದರಬೇಕು. ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು, ಕಾರ್ಮಿಕರು, ಶಾಲಾ ಮಕ್ಕಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಕ್ರೂಸರ್ ವಾಹನ ಚಾಲಕರು ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದನ್ನು ಕೂಡ ನಿಷೇಧಿಸಲಾಗಿದೆ. ಹೊಸದಾಗಿ ಮೊಟಾರ್ ವಾಹನ ಕಾಯ್ದೆಯಡಿ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ಹೇಳಿದರು.
ವೇಗಮಿತಿ ಉಲ್ಲಂಘನೆ ಮಾಡಿದರೆ 500 ರಿಂದ 1000 ರೂ. ದಂಡ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ ಒಂದು ಸಾವಿರದಿಂದ ಎರಡು ಸಾವಿರ ದಂಡ, ವಿಮೆ ಇಲ್ಲದೆ ಹಾನ ಚಾಲನೆ ಮಾಡಿದರೆ 1000 ರೂ. ದಂಡ, ನೊಂದಣಿ ಇಲ್ಲದೆ ವಾಹನ ಚಲಾಯಿಸಿದರೆ 2,000ದಿಂದ 5,000 ದಂಡ, ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದಲ್ಲಿ 1,000 ರೂ. ದಂಡ ವಿಧಿಸಲಾಗುವುದು ಎಂದ ಅವರು, ಮೊಟಾರ್ ಸೈಕಲ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬಿ ಪಾಟೀಲ, ಎಸ್.ವೈ. ಹುಣಸಿಕಟ್ಟಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.