ಬೀದರ: ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸುವುದು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖೀಲ ಭಾರತ ಏಡ್ಸ್ ನಿಯಂತ್ರಣ ನೌಕರರ ಸಂಘದಿಂದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಧಾನ ಮಂತ್ರಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ರಾಜ್ಯ ಆರೋಗ್ಯ ಸಚಿವರಿಗೆ ಬರೆದ ಮನವಿ ಪತ್ರವನ್ನು ಆರೋಗ್ಯ ಅಧಿಕಾರಿಗಳ ಮೂಲಕ ರವಾನಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಸೂರ್ಯಕಾಂತ ಎಸ್. ಮಾತನಾಡಿ, ದೇಶದಲ್ಲಿ 26 ಸಾವಿರ ಗುತ್ತಿಗೆ ನೌಕಕರರು ಸುಮಾರು 26 ವಾರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ನೌಕರರಿಗೆ ಅತ್ಯಂತ ಕಡಿಮೆ ವೇತನ ನೀಡಿ ಯಾವುದೇ ಸೇವಾ ಭದ್ರತೆ ಇಲ್ಲದೇ ಜೀತದಾಳುಗಳಂತೆ ನೋಡಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಸಂಘದ ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಗುತ್ತಿಗೆ ಆಧಾರಿತ ನೌಕರರು ಅತಿ ಹೆಚ್ಚು ಜವಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮೇಲಾಧಿಕಾರಿಗಳ ಆದೇಶವನ್ನು ತಪ್ಪದೆ ಪಾಲಿಸಿ ಕರ್ತವ್ಯವನ್ನು ತೃಪ್ತಿಕರವಾಗಿ ನಿರ್ವಹಿಸಿ, ವಿಶ್ವದಲ್ಲಿ ಎಚ್ಐವಿ ಏಡ್ಸ್ ಸೊಂಕಿನ ಸಂಖ್ಯೆಯನ್ನು ಗಣನಿಯವಾಗಿ ಕಡಿಮೆ ಮಾಡಲಾಗುತ್ತಿದೆ. ಭಾರತದಲ್ಲಿ ಎಚ್ಐವಿ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಇಷ್ಟು ವರ್ಷಗಳ ಕಾಲ ಸಮಾಜಕ್ಕಾಗಿ ಶ್ರಮಿಸಿದವರನ್ನು ಖಾಯಂ ನೌಕರರೆಂದು ಪರಿಗಣಿಸಿ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಸಂತೋಷ ಶಿಂಧೆ ಮಾತನಾಡಿ, ಏಡ್ಸ್ ಸೋಂಕಿತರನ್ನು ಸಮಾಜದಲ್ಲಿ ಜನರು ನೋಡುವ ದೃಷ್ಟಿಯೇ ಬೇರೆ ಇದೆ. ಆದರೆ, ಆರೋಗ್ಯ ವಿಭಾದಲ್ಲಿ ಏಡ್ಸ್ ನಿಯಂತ್ರಣ ನೌಕರರು ಇಂತಹ ಸೋಂಕಿತರೊಂದಿಗೆ ಆಪ್ತ ಸಮಾಲೋಚನೆ ಮಾಡಿ, ಔಷೋಧೊಪಚಾರದ ಮೂಲಕ ಎಚ್ಐವಿ ಏಡ್ಸ್ ಸೊಂಕಿತರು ಧೈರ್ಯದಿಂದ ಬಾಳುವಂತೆ ಮಾಡುತ್ತಿದ್ದಾರೆ. ಹೀಗೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುವವರನ್ನು ಸರ್ಕಾರ ಗೌರವಿಸಬೇಕು. ಸರ್ಕಾರಿ ನೌಕರಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಶಿವಕುಮಾರ, ಸಂಜುರೆಡ್ಡಿ, ನಯೂಮ್ ಪಟೇಲ, ಸಿದ್ರಾಮ ಹೂಗಾರ, ಸುರೇಖಾ, ಸಿದ್ಧಪ್ಪಾ ಎಂ., ವಾಣಿ, ಬಸವರಾಜ, ಸಂಜುಕುಮಾರ ಪೊಶೆಟ್ಟಿ, ಸಂಜೀವ ಬುಯ್ನಾ, ಸಿದ್ಧಾರೂಡ ನಿಟ್ಟೂರ, ಅನೀತಾ ಕಾಮತ ಸೇರಿದಂತೆ ಅನೇಕರು ಇದ್ದರು.