Advertisement

ಋಣಮುಕ್ತ ಪತ್ರ ವಿತರಣೆಗೆ ಸೂಚನೆ

10:17 AM Jul 04, 2019 | Naveen |

ಬೀದರ: ಸಾಲಮನ್ನಾ ಯೋಜನೆ ಅಡಿ ಬೀದರ ಜಿಲ್ಲೆಯಲ್ಲಿ ಸಾಮಮನ್ನಾ ಆದ 48,022 ರೈತರಿಗೆ ಕೂಡಲೇ ಋಣಮುಕ್ತ ಪತ್ರ ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಖಾತೆ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್‌ ಡಿಸೋಜಾ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ ಜಿಲ್ಲೆಯಲ್ಲಿ 48022 ರೈತರು ಸಾಲ ಮನ್ನಾದ ಲಾಭ ಪಡೆದಿದ್ದಾರೆ. ಒಟ್ಟು 211.33 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಈ ಪೈಕಿ ಸಹಕಾರ ಬ್ಯಾಂಕ್‌ನಿಂದ 145.82 ಕೋಟಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಿಂದ 65.51 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಯೋಜನೆ ಲಾಭ ಪಡೆದ ರೈತರಿಗೆ ಜಿಲ್ಲಾಡಳಿತ ರೈತರಿಗೆ ಋಣಮುಕ್ತ ಪತ್ರ ನೀಡುವ ಕೆಲಸ ಮಾಡಬೇಕು. ಈ ಮೂಲಕ ವಿರೋಧ ಪಕ್ಷದವರಿಗೆ ಸರ್ಕಾರದ ಸಾಧನೆ ಗೊತ್ತಾಗುತ್ತದೆ ಎಂದರು.

ವಿರೋಧ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಹಾಗೂ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ವಿವಿಧಡೆ ಸಂಚರಿಸಿ ಸರ್ಕಾರ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ರೈತರ ಸಾಲಮನ್ನಾ ಆಗಿಲ್ಲ. ಬರ ಪರಿಸ್ಥಿತಿ ನಿಭಾಯಿಸುತ್ತಿಲ್ಲ ಎಂದು ಆನೇಕ ಆರೋಪಗಳು ಮಾಡುತ್ತಿದ್ದು, ಅವುಗಳು ಸತ್ಯಕ್ಕೆ ದೂರವಾಗಿವೆ. ನಾನು ಈ ವರೆಗೆ 7 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಬರ ಸ್ಥಿತಿ, ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ವಿರೋಧ ಪಕ್ಷದವರು ಆರೋಪ ಮಾಡುವ ಮಾತುಗಳು ಎಲ್ಲಿಯೂ ಸತ್ಯ ಎಂಬುದು ಕಂಡು ಬಂದಿಲ್ಲ. ಎಲ್ಲ ಕಡೆಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಸೂಕ್ತ ನಿರ್ವಹಣೆ ಮಾಡಿದೆ. ಎಲ್ಲಿಯೂ ಮೇವು ಕೊರತೆ ಕಂಡು ಬಂದಿಲ್ಲ ಎಂದು ತಿಳಿಸಿದರು.

ಮಿನಿ ವಿಧಾನಸೌಧ ನಿರ್ಮಾಣ: ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಮೂರು ತಾಲೂಕು ಕೇಂದ್ರಗಳಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಲಾ 10 ಕೋಟಿ ರೂ. ಅನುದಾನ ನೀಡಲಾಗುವುದು. ಜಿಲ್ಲಾಡಳಿತ ಈಗಾಗಲೇ ಪ್ರಾಸ್ತಾವನೆ ಸಲ್ಲಿಸಿದೆ. ಭೂಮಿ ಗುರುತಿಸುವ ಕೆಲಸ ಆದ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಕೆಲ ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮಿನಿ ವಿಧಾನಸೌಧ ಹಾಗೂ ಜಿಲ್ಲಾಡಳಿತ ಸಂಕೀರ್ಣ ಕಾಮಗಾರಿ ಇಂದಿಗೂ ಆರಂಭ ಆಗಿಲ್ಲ. ಇದೀಗ ಹೊಸ ತಾಲೂಕು ಕೇಂದ್ರಗಳಲ್ಲಿ ಯಾವಾಗ ಕಾಮಗಾರಿ ಶುರು ಮಾಡುತ್ತಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದರ ನಗರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಟ್ಟಡಗಳ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿದ ಕೂಡಲೇ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಪಿಂಚಣಿ ಆಂದೊಲನ ನಡೆಸಿ: ಬೀದರ ಜಿಲ್ಲೆಯಲ್ಲಿ 1.90 ಲಕ್ಷ ಪಿಂಚಣಿದಾರರಿದ್ದಾರೆ. ಅವರಿಗೆ ತೊಂದರೆಯಾಗದಂತೆ ನಿಯಮಿತವಾಗಿ ಮಾಸಾಶನ ಮಂಜೂರು ಮಾಡಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅರ್ಹ ಫಲಾನುಭವಿಗಳು ಸರ್ಕಾರಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಬೇಡ. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸಂಚರಿಸಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳು ಪಡೆದು ಯೋಜನೆ ಲಾಭ ನೀಡುವಂತಾಗಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಜಿಲ್ಲಾಡಳಿತ ಜಿಲ್ಲಾ ಮಟ್ಟದಲ್ಲಿ ಬೃಹತ್‌ ಪಿಂಚಣಿ ಅದಾಲತ್‌ ಹಾಗೂ ಸಮಾವೇಶ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಶೇ. 95ರಷ್ಟು ಬಿಪಿಎಲ್ ಕಾರ್ಡ್‌: ಬೀದರ ಜಿಲ್ಲೆಯಲ್ಲಿ ಶೇ. 95ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್‌ ಹೊಂದಿವೆ. ಒಟ್ಟು 3,05,234 ಬಿಪಿಎಲ್, 34,724 ಅಂತ್ಯೋದಯ ಹಾಗೂ 9,836 ಎಪಿಎಲ್ ಪಡಿತರ ಚೀಟಿ ಇವೆ. ಸಾಲಮನ್ನಾ ಯೋಜನೆಗೆ ಪಡಿತರ ಚೀಟಿ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಸರಿ ಅಲ್ಲ ಎಂದು ತಿಳಿಸಿದರು.

ಈ ಮಧ್ಯೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಎಚ್.ಆರ್‌ ಮಹಾದೇವ, ಜಿಲ್ಲೆಯಲ್ಲಿ 3.20 ಲಕ್ಷ ಕುಟುಂಬಗಳು ಇವೆ. ಆದರೆ. ಜಿಲ್ಲೆಯಲ್ಲಿ 3.40 ಲಕ್ಷ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಒಂದು ಕಾರ್ಡ್‌ ನೀಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ, ಸಹಾಯಕ ಆಯುಕ್ತ ರುದ್ರೇಶ ಗಾಳಿ, ಜಿಪಂ ಸಿಇಒ ಮಹಾಂತೇಶ ಬೀಳಗಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next