Advertisement

107 ಪ್ರಕರಣ-1.04 ಲಕ್ಷ ದಂಡ ವಸೂಲಿ

11:54 AM Sep 07, 2019 | Naveen |

ಬೀದರ: ಜಿಲ್ಲೆಯಲ್ಲಿ ಸೆ.5ರಿಂದ ಹೊಸ ಮೋಟಾರು ವಾಹನ ಕಾಯ್ದೆ ಅನುಸಾರ ದಂಡ ವಿಧಿಸುವ ಕಾರ್ಯ ಆರಂಭಗೊಂಡಿದ್ದು ಒಂದೇ ದಿನದಲ್ಲಿ 107 ಪ್ರಕರಣಗಳಿಗೆ ರೂ. 1.04 ಲಕ್ಷ ದಂಡ ವಸೂಲಿ ಮಾಡಲಾಗಿದೆ.

Advertisement

ವಾಹನ ಸವಾರರು ರಸ್ತೆಗೆ ಬರುವ ಮುನ್ನ ವಾಹನದ ದಾಖಲೆಗಳ ಜತೆಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಜಿಲ್ಲೆಯ ಎಲ್ಲಾಕಡೆಗಳಲ್ಲಿ ಈಗಾಗಲೇ ಪೊಲೀಸ್‌ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಿದ್ದು, ಯಾರು ನಿಯಮ ಉಲ್ಲಂಘನೆ ಮಾಡುತ್ತಾರೊ ಅವರು ಭಾರೀ ಪ್ರಮಾಣದ ದಂಢ ಭರಿಸಬೇಕಾಗಿದೆ.

300ಕ್ಕೂ ಹೆಚ್ಚು ಜನರ ಸಾವು: ಬೀದರ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಪಘಾತಗಳ ಸಂಭವಿಸುತ್ತಿದ್ದು, ಪ್ರತಿ ವರ್ಷ ಸರಾಸರಿ 300ಕ್ಕೂ ಅಧಿಕ ಸಾವು ಸಂಭವಿಸುತ್ತಿವೆ. 2014-2018ನೇ ಅವಧಿಯಿಂದ ಈ ವರೆಗೆ ಪ್ರತಿವರ್ಷ 380 ಜನ ಮರಣ ಹೊಂದಿದ್ದಾರೆ. ಅಲ್ಲದೆ, 3,068 ಜನರು ಗಾಯಗೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ 315 ಜನರ ಮರಣಹೊಂದಿದ್ದು, 2,538 ಜನರು ಗಾಯಗೊಂಡಿದ್ದಾರೆ. ಬಹುತೇಕರು ರಸ್ತೆ ನಿಯಮಗಳನ್ನು ಪಾಲಿನೆ ಮಾಡದ ಹಿನ್ನೆಲೆಯಲ್ಲಿ ಮರಣ ಹೊಂದುತ್ತಿದ್ದು ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳು ಇದೀಗ ಕಡಿಮೆ ಆಗುತ್ತಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಮಾಹಿತಿ ನೀಡಿದ್ದಾರೆ.

ನಿಯಮ ಪಾಲಿಸಿ ದಂಡ ಉಳಿಸಿ: ಕೇಂದ್ರ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ, 2019 ಸೆಪ್ಟೆಂಬರ್‌ 1ರಿಂದ ಜಾರಿಗೆ ಬಂದಿದ್ದು, ಸೆ.1ರಿಂದ 4ರ ವರೆಗೆ ಜಿಲ್ಲೆಯ ಸಾರ್ವಜನಿಕರಿಗೆ ಹೊಸ ಕಾನೂನು ಅಂಶಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಜಿಲ್ಲಾ ಪೊಲೀಸರು ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇದೀಗ ಸೆ.5ರಿಂದ ಹೊಸ ಕಾನೂನು ಅಡಿಯಲ್ಲಿ ದಂಡ ವಿಧಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ದಂಡ ಪಾವತಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ದಂಡ ವಿಧಿಸುತ್ತಿರುವುದು ಸಾರ್ವಜನಿಕರ ಪ್ರಾಣ ಉಳಿಸಲು ಹೊರತು ಬೇರೆ ಉದ್ದೇಶಕ್ಕೆ ಅಲ್ಲ ಎಂಬುದನ್ನುತಿಳಿದುಕೊಳ್ಳಬೇಕು. ಸಾರ್ವಜನಿಕರು ಪೊಲೀಸ್‌ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಎಸ್‌ಪಿ ಟಿ.ಶ್ರೀಧರ್‌ ಮನವಿ ಮಾಡಿದ್ದಾರೆ.

ನಿಯಮ ಪಾಲಿಸಿ ಹಣ ಉಳಿಸಿಕೊಳ್ಳಿ: ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರ್‌ ಮತ್ತು ಜೀಪ್‌ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸಬಾರದು. ಚಾಲಕರು ವಾಹನದೊಂದಿಗೆ ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌, ಎಮಿಷನ್‌ ಸರ್ಟಿಫಿಕೇಟ್, ರಿಜಿಸ್ಟ್ರೆಷನ್‌ ಸರ್ಟಿಫಿಕೇಟ್ ಹಾಗೂ ಪರ್ಮಿಟ್ ಮೂಲ ದಾಖಲಾತಿಗಳನ್ನು ಇಡತಕ್ಕದ್ದು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವಂತಿಲ್ಲ. ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರದ ವ್ಯಕ್ತಿಗಳಿಗೆ ಹಾಗೂ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡಿದ ವಾಹನದ ಮಾಲೀಕರು 25 ಸಾವಿರ ರೂ.ದಂಡದ ಜೊತೆಗೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿ ಪಡಿಸುವ ಕಾನೂನು ಜಾರಿಗೆ ಬಂದಿದೆ. ವಾಹನ ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ನೀಡಬಾರದು. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಕನಿಷ್ಟ 10 ಸಾವಿರದಿಂದ ಹೆಚ್ಚಿನ ದಂಡದ ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಬಹುದು. ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ವಾಹನವನ್ನು ಆಯಾ ಸ್ಥಳಗಳಲ್ಲಿ ನಿಗದಿಪಡಿಸಿದ ವೇಗದ ಮಿತಿಯೊಳಗೆ ಚಾಲನೆ ಮಾಡಬೇಕಾಗಿದೆ. ಸಂಚಾರಿ ನಿಯಮ ಪಾಲನೆ ಮಾಡದ ವ್ಯಕ್ತಿಗಳು ದಂಡ ಮೊತ್ತ ತೆರಬೇಕಾಗಿದೆ.

Advertisement

ರಸ್ತೆ ನಿಯಮ ಕಡ್ಡಾಯ ಪಾಲಿಸಿ ರಸ್ತೆ ನಿಯಮ ಪಾಲಿಸುವ ಮೂಲಕ ಸಾವು-ನೋವುಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಯತ್ನಿಸುತ್ತಿದೆ. ಈ ಕಾರ್ಯಕ್ಕೆ ಜಿಲ್ಲೆಯ ಜನರ ಸಹಕಾರ ಕೂಡ ಮುಖ್ಯವಾಗಿದೆ. ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದ್ದು, ಪ್ರತಿಯೊಬ್ಬರು ಕಾನೂನು ಕಾಪಾಡುವ ಮೂಲಕ ತಮ್ಮ ಅಮೂಲ್ಯವಾದ ಪ್ರಾಣ ಉಳಿಸಿಕೊಳ್ಳಬೇಕು.
ಟಿ.ಶ್ರೀಧರ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next