Advertisement

ಬೀದರ್‌ನಲ್ಲೂ ದೋಸ್ತಿಗಳ ಕಿತ್ತಾಟ

10:39 AM Apr 10, 2019 | Naveen |

ಬೀದರ: ಮಂಡ್ಯ, ಮೈಸೂರು ಹಾಗೂ ಹಾಸನದಲ್ಲಿ ಮೈತ್ರಿ ಗೊಂದಲ ಏರ್ಪಟ್ಟ ಬೆನ್ನಲ್ಲೇ, 13 ದಿನಗಳಲ್ಲಿ ಲೋಕಸಭೆ
ಚುನಾವಣೆ ಎದುರಿಸಲಿರುವ ಬೀದರ್‌ ಕ್ಷೇತ್ರದಲ್ಲೂ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಸಮನ್ವಯದ ಕೊರತೆ ಎದುರಾಗಿದೆ.

Advertisement

ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಜೆಡಿಎಸ್‌ ಕಾರ್ಯಕರ್ತರು ಗೊಂದಲದಲ್ಲಿದ್ದು, ಪಕ್ಷದ ಹೈಕಮಾಂಡ್‌ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ್‌ ಖಂಡ್ರೆ ಹಾಗೂ
ಕಾಂಗ್ರೆಸ್‌ ಮುಖಂಡರು ಯಾವುದೇ ತಾಲೂಕಿನ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಜೆಡಿಎಸ್‌ ಮುಖಂಡರ ಪ್ರಮುಖ ಆರೋಪ. ಕಾಂಗ್ರೆಸ್‌ ಪದಾ ಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಗಳು ಜಿಲ್ಲಾದ್ಯಂತ ಮೇಲಿಂದ ಮೇಲೆ ನಡೆಯುತ್ತಿವೆ. ಆದರೂ ಈವರೆಗೆ ಜೆಡಿಎಸ್‌ ಪದಾಧಿ ಕಾರಿಗಳ ಅಥವಾ ಕಾರ್ಯಕರ್ತರ ಸಭೆ ನಡೆದಿಲ್ಲ. ಹೇಳಿಕೊಳ್ಳುವುದಕ್ಕೆ ಮಾತ್ರ ಮೈತ್ರಿ, ಆದರೆ, ಪ್ರಚಾರಕ್ಕೂ ನಮ್ಮನ್ನು ಕರೆಯುತ್ತಿಲ್ಲ ಎಂದು ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್‌ (ದಕ್ಷಿಣ) ಕ್ಷೇತ್ರದಿಂದ ಗೆಲುವು ಕಂಡ ಬಂಡೆಪ್ಪ ಖಾಶೆಂಪೂರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕೂಡ ಸದ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ. ಹುಮನಾಬಾದ
ಕ್ಷೇತ್ರದಿಂದ ಸ್ಪರ್ಧೆ ನಡೆಸಿದ ನಸಿಮೋದ್ದೀನ್‌ ಪಟೇಲ್‌ ಕೂಡ ಕ್ಷೇತ್ರದಲ್ಲಿ ಇಲ್ಲ. ಇವರಿಬ್ಬರು ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತಗಳಲ್ಲಿ ಪ್ರಚಾರದಲ್ಲಿ ಇದ್ದಾರೆ.

ಏತನ್ಮಧ್ಯೆ ಜೆಡಿಎಸ್‌ ಕಾರ್ಯಕರ್ತರು ಸಾರ್ವತ್ರಿಕ ಚುನಾವಣೆಯಲ್ಲಿ ಕೈಕಟ್ಟಿ ಕೂರುವ ಸ್ಥಿತಿಗೆ ಬಂದಿದ್ದಾರೆ. ಏ.2ರಂದು ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ
ಸಮಾವೇಶಗೊಂಡ ಎರಡು ಪಕ್ಷದವರು ನಂತರ ದಿಕ್ಕು ಬದಲಿಸಿದ್ದಾರೆ. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕು
ಕಾಂಗ್ರೆಸ್‌ ವಶದಲ್ಲಿ ಇವೆ. ಒಂದು ಜೆಡಿಎಸ್‌ ಹಿಡಿತದಲ್ಲಿರುವ ಕಾರಣ ಜೆಡಿಎಸ್‌ ಕಾರ್ಯಕರ್ತರಿಗೆ ಹೆಚ್ಚು ಪ್ರಾಮುಖತೆ
ನೀಡುತ್ತಿಲ್ಲ ಎನ್ನಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧೆ ನಡೆಸಲಿರುವ ಅಭ್ಯರ್ಥಿಗಳು ಹೆಚ್ಚು ಆತಂಕದಲ್ಲಿ ಇದ್ದಾರೆ.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳಬಹುದು. ಆದರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲವಾದರೆ ಯಾವ ಪಕ್ಷಕ್ಕೆ ಮತ ಹಾಕಿ ಎಂದು ಹೇಳಬೇಕು. ಆ
ಸಂದರ್ಭದಲ್ಲಿ ಜೆಡಿಎಸ್‌ಗೆ ಹಾಕಿ ಎಂದರೆ ಜನರು ನಮ್ಮ ಮಾತು ಕೇಳುತ್ತಾರೆಯೇ ಎಂಬುದು ಹೆಸರು ಹೇಳದ ಪ್ರಮುಖರೊಬ್ಬರ ಅಭಿಪ್ರಾಯ.

Advertisement

ಮೈತ್ರಿಯಾಗಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ
ಜೆಡಿಎಸ್‌ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತಿಲ್ಲ ಎಂದು ಕೆಲ ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದವರು ತಮ್ಮ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್‌ ಕಾರ್ಯಕರ್ತರನ್ನು ಕರೆಯುತ್ತಿಲ್ಲ. ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಈ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು.
.ಶಿವಪುತ್ರ ಮಾಳಗೆ,
ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಮೈತ್ರಿ ಪಕ್ಷಗಳಲ್ಲಿ ಯಾವುದೆ ಗೊಂದಲಗಳು ಇಲ್ಲ. ಎರಡು
ಪಕ್ಷದವರು ಸೇರಿ ಈಶ್ವರ ಖಂಡ್ರೆ ಅವರ ಜಯಕ್ಕಾಗಿ ಶ್ರಮಿಸಲಿದ್ದಾರೆ. ವಿವಿಧೆಡೆ ನಮ್ಮ ಮುಖಂಡರು ಭಾಗವಹಿಸುತ್ತಿದ್ದಾರೆ. ನಾಮಪತ್ರ ಹಿಂದೆ ಪಡೆಯುವ ಪ್ರಕ್ರಿಯೆಗಳು
ಸೋಮವಾರ ಪೂರ್ಣಗೊಂಡಿದ್ದು, ಇದೀಗ ಎಲ್ಲ ಕಡೆಗಳಲ್ಲಿ ಸಭೆ ಕರೆಯಲಾಗುವುದು. ಅಲ್ಲದೆ, ಪ್ರಚಾರದಲ್ಲಿ ಇರುವ ಸಚಿವ ಬಂಡೆಪ್ಪ ಖಾಶೆಂಪೂರ್‌ ಜಿಲ್ಲೆಗೆ ಆಗಮಿಸಿ ಜೆಡಿಎಸ್‌ ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಲಿದ್ದಾರೆ.
. ರಮೇಶ ಪಾಟೀಲ ಸೋಲಪುರ್‌,
ಜೆಡಿಎಸ್‌ ಜಿಲ್ಲಾಧ್ಯಕ್ಷ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next