Advertisement

ಈಶ್ವರ ಖಂಡ್ರೆ ಸೋಲಿಗೆ ಮೈತ್ರಿ ವೈಫಲ್ಯವೇ ಕಾರಣ?

10:47 AM May 25, 2019 | Naveen |

ಬೀದರ: ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲುವು ಕಂಡಿದ್ದು, ಇದೀಗ ಜಿಲ್ಲೆಯಲ್ಲಿ ಭಾರಿ ಚರ್ಚೆ ನಡೆಯುತ್ತಿವೆ.

Advertisement

ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರುವ ಈಶ್ವರ ಖಂಡ್ರೆ ರಾಜಕೀಯ ಕುಟುಂಬದಿಂದ ಬಂದಿದ್ದು, ಚುನಾವಣೆಯ ಅನೇಕ ತಂತ್ರಗಾರಿಕೆಯ ಮೂಲಕ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರವಿತ್ತು. ಚುನಾವಣಾ ಫಲಿತಾಂಶ ಅದನ್ನು ಸುಳ್ಳಾಗಿಸಿದೆ. ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡೆದಿದ್ದು, ಬಿಜೆಪಿಗೆ ಯಾವ ಕಾರಣಕ್ಕೆ ಭಾರಿ ಅಂತರದ ಲೀಡ್‌ ಸಿಕ್ಕಿದೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ಚಿಂತೆಗೆ ಕಾರಣವಾಗಿದೆ.

ಮೈತ್ರಿ ವೈಫಲ್ಯ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮೈತ್ರಿ ಕೆಲಸ ಮಾಡಿಲ್ಲ ಎಂಬುದು ಸದ್ಯ ಎಲ್ಲಕಡೆ ಕೇಳಿ ಬರುತ್ತಿದೆ. ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿಲ್ಲ ಎಂಬ ಆರೋಪಗಳು ಕೂಡ ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದಿದ್ದವು. ಅಲ್ಲದೇ ಕಾಂಗ್ರೆಸ್‌ ಪಕ್ಷದವರು ಕೂಡ ಜೆಡಿಎಸ್‌ ಪಕ್ಷಕ್ಕೆ ಮಹತ್ವ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಎರಡೂ ಪಕ್ಷಗಳಲ್ಲಿ ಸಮನ್ವಯದ ಕೊರತೆಯೇ ಈಶ್ವರ ಖಂಡ್ರೆ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಬಸವಕಲ್ಯಾಣ ಲೀಡ್‌: ಸದ್ಯ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಂಟಿಂಗ್‌ ಮಾಡುವ ಹಾಗೂ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಗುರುತಿಸಿಕೊಂಡಿರುವ ಶಾಸಕ ಬಿ.ನಾರಾಯಣರಾವ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಲೀಡ್‌ ನೀಡುವಲ್ಲಿ ವಿಫಲರಾಗಿದ್ದಾರೆ. ಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 88,805 ಮತಗಳು ಹಾಗೂ ಕಾಂಗ್ರೆಸ್‌ ಅಭ್ಯರ್ಥಿ 50,067 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ 38,738 ಮತಗಳ ಲೀಡ್‌ ಪಡೆದುಕೊಂಡಿದೆ.

ಹುಮನಾಬಾದ ಲೀಡ್‌: ಸದ್ಯ ಹುಮನಾಬಾದ ಕ್ಷೇತ್ರದಿಂದ ರಾಜಶೇಖರ ಪಾಟೀಲ ಶಾಸಕರಾಗಿ ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 63,182 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ 76,900 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಗೆ 13,519 ಮತಗಳ ಲೀಡ್‌ ಬಂದಿದೆ. ಕಳೆದ ಚುನಾವಣೆಯಲ್ಲಿ ಕೂಡ ಹುಮನಾಬಾದ ಕ್ಷೇತ್ರದಲ್ಲಿ ಬಿಜೆಪಿಗೆ 12 ಸಾವಿರ ಮತಗಳ ಲೀಡ್‌ ಇತ್ತು. ಕಾಂಗ್ರೆಸ್‌ ಅಭ್ಯರ್ಥಿ ಹುಮನಾಬಾದ ಕ್ಷೇತ್ರದ ಮೇಲೆ ಭಾರಿ ನಂಬಿಕೆ ಇರಿಸಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಲೀಡ್‌ ಸಿಗುವ ಭರವಸೆ ಹೊಂದಿದ್ದರು. ಆದರೆ, ಮತದಾರ ಪ್ರಭುಗಳು ಯಾರ ಮಾತಿಗೂ ಬೆಲೆ ನೀಡದೆ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Advertisement

ಪಡೆದ ಮತ ಲೆಕ್ಕಾಚಾರ ಶುರು: ಬೀದರ ಹಾಗೂ ಬೀದರ ದಕ್ಷಿಣ ಕ್ಷೇತ್ರಗಳನ್ನು ಬಿಟ್ಟರೆ ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯೇ ಲೀಡ್‌ ಪಡೆದುಕೊಂಡಿರುವುದು ಸಧ್ಯ ಕಾಂಗ್ರೆಸ್‌ ಮುಖಂಡರ ನಿದ್ದೆಗೆಡಿಸಿದೆ. ಪ್ರಬಲ ಅಭ್ಯರ್ಥಿಗೆ ಯಾವ ಕಾರಣಕ್ಕೆ ಹಿನ್ನೆಡೆ ಉಂಟಾಯಿತು ಎಂದು ಕಾಂಗ್ರೆಸ್‌ ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಸ್ವಕ್ಷೇತ್ರದಲ್ಲಿಯೇ 12,262 ಮತಗಳ ಲೀಡ್‌ ಬಿಜೆಪಿ ಪಡೆದುಕೊಂಡಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತರೆ ಕ್ಷೇತ್ರಗಳಲ್ಲಿ ಯಾವ ಕಾರಣಕ್ಕೆ ಕಡಿಮೆ ಮತಗಳು ಬಂದಿವೆ ಎಂದು ಪ್ರಶ್ನಿಸು ಹಕ್ಕನ್ನು ಕೂಡ ಖಂಡ್ರೆ ಕಳೆದುಕೊಂಡಿದ್ದಾರೆ ಎಂಬ ಮಾತುಗಳು ಮೈತ್ರಿ ಮುಖಂಡರಿಂದಲೆ ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ ಬಿಜೆಪಿಗಿರಲಿಲ್ಲ ಸ್ಥಾನಮಾನ
ಲೋಕಸಭೆ ಚುನಾವಣೆಯಲ್ಲಿ ಭಾರಿ ಮತಗಳನ್ನು ಪಡೆದಿರುವ ಬಿಜೆಪಿಗೆ ಬೀದರ್‌ ಜಿಲ್ಲೆಯಲ್ಲಿ ಹೇಳಿಕೊಳ್ಳುವ ರಾಜಕೀಯ ಸ್ಥಾನಮಾನಗಳು ಇಲ್ಲ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ತಲಾ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರು ಇದ್ದಾರೆ. ಬಹುತೇಕ ಹುದ್ದೆಗಳು ಕಾಂಗ್ರೆಸ್‌ ಪಕ್ಷದ ಅಧೀನದಲ್ಲಿ ಇವೆ. ವಿಧಾನ ಸಭೆ ಚುನಾವಣೆಯಲ್ಲಿ ಮೀಸಲು ಕ್ಷೇತ್ರ ಬಿಟ್ಟರೆ ಬೇರೆ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅಲ್ಲದೆ, ಸಧ್ಯ ನಡೆಯುತ್ತಿರುವ ಪುರಸಭೆ ಚುನಾವಣೆಯಲ್ಲಿ ಹುಮನಾಬಾದ ಪಟ್ಟಣದಲ್ಲಿ ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಕೂಡ ಇತ್ತು. ಕೆಲ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್‌ ಪಕ್ಷದ ಪ್ರಭಾವಕ್ಕೆ ಮಣಿದು ನಾಮಪತ್ರ ಹಿಂದೆ ಪಡೆದುಕೊಂಡಿರುವುದು ತಾಜಾ ಉದಾಹರಣೆಯಾಗಿದೆ. ಆದರೂ, ಮೋದಿ ಪ್ರಭಾವದಿಂದ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ ಎಂಬ ಲೆಕ್ಕಾಚಾರಕ್ಕೆ ಎಲ್ಲಾ ಪಕ್ಷಗಳು ಒಪ್ಪಿಕೊಂಡಿವೆ. ಕಳೆದ ಚುನಾವಣೆಯಲ್ಲಿ ಕೂಡ ಕಲ್ಯಾಣ ಬಿಜೆಪಿಗೆ ಬಹುಮತ ನೀಡಿತ್ತು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮಹತ್ವ ನೀಡಿತ್ತು.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next