ಬೀದರ: ಲೋಕಸಭೆ ಚುನಾವಣೆಯಲ್ಲಿ 1.16 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದ ಬಿಜೆಪಿಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಭಾರೀ ಮುಖ ಭಂಗ ಉಂಟು ಮಾಡಿದೆ. ಅಲ್ಲದೆ, ಜೆಡಿಎಸ್ ಪಕ್ಷದ ವರ್ಚಸ್ಸು ಕೂಡ ಕಡಿಮೆಯಾಗಿರುವುದು ಫಲಿತಾಂಶದಿಂದ ಕಂಡು ಬರುತ್ತಿದೆ.
ಜಿಲ್ಲೆಯ ಮೂರು ಪುರಸಭೆ, ತಲಾ ಒಂದು ನಗರದ ಸಭೆ ಹಾಗೂ ಪಟ್ಟಣ ಪಂಚಾಯತ ಚುನಾವಣೆಯ ಒಟ್ಟು 128 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 75 ಸ್ಥಾನ ಕಾಂಗ್ರೆಸ್, 31 ಸ್ಥಾನ ಬಿಜೆಪಿ, 13 ಸ್ಥಾನಗಳನ್ನು ಜೆಡಿಎಸ್ ಪಡೆದುಕೊಂಡಿವೆ. ಬಸವಕಲ್ಯಾಣ ನಗರಸಭೆ, ಭಾಲ್ಕಿ ಪುರಸಭೆ, ಹುಮನಾಬಾದ ಪುರಸಭೆ, ಚಿಟಗುಪ್ಪ ಪುರಸಭೆಗಳ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ತನ್ನ ವಶಕ್ಕೆ ಪಡೆದಿದೆ. ಆದರೆ, ಔರಾದ ಪಟ್ಟಣ ಪಂಚಾಯತ ಅಧಿಕಾರವನ್ನು ಮಾತ್ರ ಬಿಜೆಪಿ ತನ್ನದಾಗಿಸಿಕೊಂಡಿದೆ.
ಲೋಕಸಭೆ ಫಲಿತಾಂಶದ ನಂತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಮೋದಿ ಪ್ರಭಾವದ ಪರಿಣಾಮ ಬೀರುತ್ತದೆ ಎಂದು ರಾಜಕೀಯ ಮುಖಂಡರ ಲೆಕ್ಕಾಚಾರ ಉಲಾr ಹೊಡೆದಿದೆ. ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಪಡೆದು ಚುನಾವಣೆ ನಡೆಸಿದ್ದು, ಕಾಂಗ್ರೆಸ್ ಪಾಲಿಗೆ ಸಿಹಿ ಬಂದಿದೆ. ಲೋಕಸಭೆಯಲ್ಲಿ ಗೆದ್ದು ಬೀಗಿದ ಬಿಜೆಪಿಗೆ ಅದೇ ಹವಾ ಉಳಿಸಿಕೊಳ್ಳುವ ಬಯಕೆ ಇತ್ತು. ಆದರೆ, ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಪೈಪೋಟಿನೀಡಿ ತಾನು ದುರ್ಬಲವಾಗಿಲ್ಲ ಎನ್ನುವ ಸಂದೇಶವನ್ನು ಸ್ಥಳೀಯ ಚುನಾವಣೆ ಫಲಿತಾಂಶದ ಮೂಲಕ ಸಾರಿದೆ.
ಹುಮನಾಬಾದ ಮತ್ತು ಚಿಟಗುಪ್ಪ ಪುರಸಭೆಗಳ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಹಾಗೂ ಸಚಿವರಾದ ರಾಜಶೇಖರ ಪಾಟೀಲ, ಭಾಲ್ಕಿಯಲ್ಲಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಸವಕಲ್ಯಾಣದಲ್ಲಿ ಶಾಸಕ ಬಿ.ನಾರಾಯಣರಾವ್ ಹಾಗೂ ಔರಾದನಲ್ಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ ಪ್ರತಿಷ್ಠೆಯಾಗಿ ಚುನಾವಣೆ ನಡೆಸಿದ್ದು, ಅವರವರ ಕ್ಷೇತ್ರದಲ್ಲಿ ಅವರ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮಿಸಿ ಸ್ಥಳೀಯ ಸಂಸ್ಥೆಯನ್ನು ತಮ್ಮ ಹಿಡಿತದಲ್ಲಿ ಉಳಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಾಗಿ ಸ್ಪರ್ಧೆ ನಡೆಸಿದ್ದು, ಲೋಕಲ್ ವಾರ್‌ನಲ್ಲಿ ಎರಡೂ ಪಕ್ಷಗಳು ವೈರಿಗಳಂತೆ ಹೋರಾಟ ನಡೆಸಿದ್ದವು. ಹಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳೇ ನೇರ ಪ್ರತಿಸ್ಪರ್ಧಿಯಾಗಿರುವುದು ವಿಶೇಷ. ಒಟ್ಟಾರೆ ಲೋಕಲ್ವಾರ್ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.