Advertisement

ವರದಿ ಕೊಟ್ಟರೆ ಕಾರ್ಖಾನೆ ಮುಚ್ಚಲು ಕ್ರಮ

10:11 AM Jul 07, 2019 | Naveen |

ಬೀದರ: ಜಿಲ್ಲೆಯ ಕೋಳಾರ ಹಾಗೂ ಹುಮನಾಬಾದ ಕೈಗಾರಿಕೆ ಪ್ರದೇಶಗಳಲ್ಲಿನ ಕಾರ್ಖಾನೆಗಳು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತು ಜಿಲ್ಲಾಡಳಿತ ಸೂಕ್ತ ವರದಿ ನೀಡಿದರೆ ಕಾರ್ಖಾನೆ ಮುಚ್ಚುವ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ| ಕೆ.ಸುಧಾಕರ್‌ ಹೇಳಿದರು.

Advertisement

ಪರಿಸರ ಮಾಲಿನ್ಯದ ದೂರುಗಳ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ನಗರದ ಕೋಳಾರ ಕೈಗಾರಿಕಾ ಪ್ರರದೇಶದ ವಿವಿಧ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಕಾರ್ಖಾನೆಗಳ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸಿ ವರದಿ ನೀಡಿದರೆ ಯಾವುದೇ ಮುಲಾಜು ಇಲ್ಲದೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆ ಪ್ರದೇಶದಲ್ಲಿ ರಾಸಾಯನಿಕ ಹೊರಸೂಸುವ ಕಾರ್ಖಾನೆಗಳಿಂದ ಜನಜೀವನಕ್ಕೆ ಹಾನಿಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕುಡಿಯುವ ನೀರು ಹಾಗೂ ವಾಯು ಮಾಲಿನ್ಯ ಹೆಚ್ಚಾಗಿದೆ. ಈಗಾಗಲೇ ಕೇಂದ್ರ ಪರಿಸರ ಮಂಡಳಿ ಹಾಗೂ ಹಸಿರು ಮಾಲಿನ್ಯ ಮಂಡಳಿ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ವರದಿ ನೀಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ವರದಿ ನೀಡಿದರೆ ಸಂಬಂಧಿಸಿದ ರಾಸಾಯನಿಕ ಕಾರ್ಖಾನೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಘನತ್ಯಾಜ ವಿಲೇವಾರಿಗಾಗಿ ಬೀದರ್‌ ನಗರದಲ್ಲಿ 30 ಎಕರೆ ಭೂಮಿ ಗುರುತಿಸಲಾಗಿದೆ. ಹಳ್ಳಿಖೇಡ್‌ ಪುರಸಭೆ ಹೊರತುಪಡಿಸಿ ಎಲ್ಲಾ ಔರಾದ್‌, ಹುಮನಾಬಾದ್‌, ಬಸವಕಲ್ಯಾಣ, ಭಾಲ್ಕಿ, ಚಿಟ್ಟಗುಪ್ಪಾ ಪಟ್ಟಣಗಳಲ್ಲಿ ತ್ಯಾಜ ವಿಲೇವಾರಿಗೆ ಭೂಮಿ ಗುರುತಿಸಲಾಗಿದೆ. ಹಾಗೇ, 125 ಗ್ರಾಮ ಪಂಚಾಯತ್‌ಗಳಲ್ಲೂ ಭೂಮಿ ಗುರುತಿಸಲು ಜಿಲ್ಲಾ ಪಂಚಾಯತ್‌ ಸಿಇಒ ಮುಂದಾಗಿದ್ದಾರೆ ಎಂದು ತಿಳಿಸಿದರು. ಪರಿಸರ ಮಾಲಿನ್ಯದ ಬಗ್ಗೆ ವ್ಯಾಪಕ ದೂರುಗಳು ಬಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾಕರ್‌, ತಾವು ಅಧಿಕಾರ ವಹಿಸಿಕೊಂಡು ಕೇವಲ ಹತ್ತು ದಿನಗಳಾಗಿವೆ. ಹಂತಹಂತವಾಗಿ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಡಾ| ಮಹಾದೇವ, ಜಿಪಂ ಸಿಇಒ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next