Advertisement

ಕನಕ ಸಾಹಿತ್ಯ ಎಲ್ಲರಿಗೂ ಆದರ್ಶ: ಗೀತಾ

03:10 PM Nov 16, 2019 | Naveen |

ಬೀದರ: ಕಥೆ, ಕೀರ್ತನೆಗಳ ಮೂಲಕ ಸಮಾಜ ಸುಧಾರಿಸಲು ಪ್ರಯತ್ನಿಸಿದ್ದ ಕನಕದಾಸರ ಸಂದೇಶಗಳು ಎಲ್ಲರಿಗೂ ಆದರ್ಶವಾಗಿವೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಹೇಳಿದರು.

Advertisement

ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಭಕ್ತ ಶ್ರೇಷ್ಠ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿಷ್ಠೆ-ಭಕ್ತಿಯೊಂದಿಗೆ ಕೃಷ್ಣನ ದರ್ಶನ ಪಡೆದ ಕನಕದಾಸರು ಶ್ರೇಷ್ಠ ಭಕ್ತರು. ಹಾಗೂ ತಮ್ಮಲ್ಲಿರುವ ಎಲ್ಲ ಸಂಪತ್ತನ್ನು ಸಮಾಜದಲ್ಲಿನ ಬಡವರಿಗೆ ಸಮರ್ಪಿಸಿದ್ದ ಮಹಾದಾನಿ. ಅವರ ಸಾಹಿತ್ಯವನ್ನು ಓದುವ ಮೂಲಕ ಅವರ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಕನಕದಾಸರು ತಮಗೆ ದೊರೆತ ಅಪಾರ ಪ್ರಮಾಣದ ಚಿನ್ನವನ್ನು ಬಡವರಿಗೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು.

ಅವರ ಜೀವನ, ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ಶಾಸಕ ರಹೀಮ್‌ ಖಾನ್‌ ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಹೊಡೆದೋಡಿಸಲು ಯತ್ನಿಸಿದ್ದ ಕನಕದಾಸರು ಸರ್ವಕಾಲಕ್ಕೂ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಚಿಂತನೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

Advertisement

ಕರ್ನಾಟಕ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ರಾಜಕುಮಾರ ಅಲ್ಲೂರೆ ಅವರು ಕನಕದಾಸರ ಜೀವನ ಮತ್ತು ಸಾಧನೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚನ್ನಬಸವ ಹೆಡೆ ಅವರು ನಿರೂಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ಸಿದ್ರಾಮ ಸಿಂಧೆ ವಂದಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ, ಸದಸ್ಯ ಬಾಬುರಾವ್‌ ಮಲ್ಕಾಪೂರೆ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಮುಖಂಡರಾದ ಅಮೃತರಾವ್‌ ಚಿಮಕೋಡೆ, ಪಂಡಿತರಾವ್‌ ಚಿದ್ರಿ, ಮಲ್ಲಿಕಾರ್ಜುನ್‌ ಬಿರಾದಾರ್‌, ಬಸವರಾಜ ಹೆಡೆ, ಲಕ್ಷ್ಮಣ ಮೇತ್ರೆ, ಎಂ.ಎಸ್‌.ಕಟಗಿ, ಸಂತೋಷ ಜೋಳದಾಪಕಾ, ವಿಜಯಕುಮಾರ ಸೊನಾರೆ, ವಿರೂಪಾಕ್ಷ ಗಾದಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.