ಬೀದರ: ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯತ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ರಸ್ತೆ ನಿರ್ಮಾಣ, ರೈತರ ಸಮಸ್ಯೆ ನಿವಾರಣೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾ ಪಂಚಾಯತದ ಎಲ್ಲ್ಲ ಸದಸ್ಯರು ಮೊದಲ ಆದ್ಯತೆ ನೀಡಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಜಿಲ್ಲೆಯ ಸರ್ವಾಂಗೀಣ ಏಳ್ಗೆಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ ಎಂದು ಹೇಳಿದರು.
ನೂತನ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಮಾತನಾಡಿ, ಜಿಲ್ಲೆಯ ಜನರ ಅಪೇಕ್ಷೆಯಂತೆ ಕೆಲಸ ನಿರ್ವಹಿಸುವೆ. ಸದಾ ಕಾಲ ಜನರೊಂದಿಗಿದ್ದು, ಅವರ ಬೇಡಿಕೆಗಳಿಗೆ ಸ್ಪಂದಿಸುವೆ. ಜಿಲ್ಲೆಯ ಜನರು ಮೆಚ್ಚುವ ರೀತಿ ಆಡಳಿತವನ್ನು ಜನರ ಹತ್ತಿರ ಕೊಂಡೊಯ್ಯಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಲಿಂಗಾಯತ ಮಠದ ಅಕ್ಕ ಅನ್ನಪೂರ್ಣ ತಾಯಿ, ಡಾ| ಗಂಗಾಂಬಿಕಾ, ಆಣದೂರ ವರ್ಜೋತಿ ಭಂತ್ಯೆ, ಸೈಯ್ಯದ್ ಅಬ್ದಲ್ ಖಾತಿಮ್ ಮೌಲ್ವಿ, ಡಿಸೋಜಾ ಪಾಸ್ಟರ್ ಮಾತನಾಡಿದರು. ನಂತರ ಮುಗಳಖೋಡ ಹಾಗೂ ಜೀಡಗಾ ಮಠದ ಸ್ವಾಮೀಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೂತನ ಕಚೇರಿಗೆ ಪೂಜೆ ಸಲ್ಲಿಸಿ ಆಶಿರ್ವಚನ ನೀಡಿದರು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಮುಖಂಡರಾದ ಮೀನಾಕ್ಷಿ ಸಂಗ್ರಾಮ, ಪಂಡಿತರಾವ್ ಚಿದ್ರಿ, ಕೆ.ಡಿ.ಗಣೇಶ, ಬಸವರಾಜ ಜಾಬಶೆಟ್ಟಿ, ವಿಜಯಕುಮಾರ ಖಾಶೆಂಪೂರ, ಬಸವರಾಜ ಹೇಡೆ, ಅಮೃತರಾವ್ ಚಿಮಕೋಡ್, ಮಾರುತಿ ಬೌದ್ದೆ, ವಿರೂಪಾಕ್ಷ ಗಾದಗಿ, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.