Advertisement

ನನಸಾಗದ ಹೈಟೆಕ್‌ ಲೈಬ್ರರಿ ಕನಸು

06:56 PM Oct 24, 2019 | |

ಬೀದರ: ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ನಿಷ್ಕಾಳಜಿತನದಿಂದಾಗಿ ಸಾಂಸ್ಕೃತಿಕ ನಗರ ಬೀದರನಲ್ಲಿ ಹೈಟೆಕ್‌ ನಗರ ಕೇಂದ್ರ ಗ್ರಂಥಾಲಯ (ಡಿಜಿಟಲ್‌) ನಿರ್ಮಾಣದ ಕನಸು ನನಸಾಗಿಯೇ ಉಳಿದಿದೆ. ವರ್ಷಗಳೂ ಉರುಳಿದರೂ ಕಟ್ಟಡಕ್ಕಾಗಿ ನಿವೇಶನ ಅಂತಿಮಗೊಳ್ಳದ ಕಾರಣ ಪುಸ್ತಕ ಪ್ರಿಯರು ಸೌಲಭ್ಯ ವಂಚಿತ ಗ್ರಂಥಾಲಯದಲ್ಲೇ ಓದುವಂತಾಗಿದೆ.

Advertisement

ಜ್ಞಾನಾರ್ಜನೆ ಮೂಲವೇ ಗ್ರಂಥಾಲಯ. ಆದರೆ, ಜಿಲ್ಲಾ ಕೇಂದ್ರವಾಗಿರುವ ಬೀದರನಲ್ಲಿ ಈವರೆಗೆ ಆಧುನಿಕ ತಂತ್ರಜ್ಞಾನವುಳ್ಳ ಒಂದು ಸುಸಜ್ಜಿತ ಗ್ರಂಥಾಲಯ ರೂಪಿಸಲು ಸಾಧ್ಯವಾಗಿಲ್ಲ. ಮೂರ್‍ನಾಲ್ಕು ದಶಕಗಳಷ್ಟು ಹಳೆಯದಾಗಿರುವ, ಪಾಳು ಬಿದ್ದಿರುವ ಕಟ್ಟಡದಲ್ಲಿಯೇ ನಗರದ ಮತ್ತು ಜಿಲ್ಲಾ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಪತ್ರಿಕೆಗಳು, ಪುರವಣಿಗಳ ಜತೆಗೆ ಸಾಹಿತ್ಯ ಸೇರಿದಂತೆ ವಿವಿಧ ಪುಸ್ತಕ ಓದಬೇಕಾದರೆ ವಿದ್ಯಾರ್ಥಿಗಳು, ಓದುಗರು ಅನಿವಾರ್ಯವಾಗಿ ಸೊರಗಿ ಹೋಗಿರುವ ಈ ಗ್ರಂಥಾಲಯಕ್ಕೆ ಹೋಗುವಂಥ ಅನಿವಾರ್ಯತೆ ಇದೆ.

ನಗರದ ಹೃದಯ ಭಾಗವಾಗಿರುವ ಜನವಾಡಾ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ 1976ರಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ 2009ರಲ್ಲಿ ನಗರ ಕೇಂದ್ರ ಗ್ರಂಥಾಲಯ ಕೇಂದ್ರ ಸ್ಥಾಪಿಸಲಾಗಿದೆ. ಅಂದು ಹೇಗಿದೆಯೋ ಈಗಲೂ ಹಾಗೆಯೇ ಇದೆ. ಸಾಕಷ್ಟು ಅನುದಾನ, ಪುಸ್ತಕಗಳ ನೀಡಲಾಗುತ್ತಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ. ಪ್ರತಿ ನಿತ್ಯ ನಗರ ಗ್ರಂಥಾಲಯಕ್ಕೆ 600ಕ್ಕೂ ಜನರು ಭೇಟಿ ಕೊಡುವ ಈ ಗ್ರಂಥಾಲಯ ತೀರಾ ಇಕ್ಕಟ್ಟಾದ ಕಟ್ಟಡವಾಗಿರುವುದರಿಂದ ಓದುಗರಿಗೆ ಕಿರಿಕಿರಿ ತಪ್ಪಿಲ್ಲ. ಲಭ್ಯ ಸ್ಥಳದಲ್ಲೇ ಕಚೇರಿ ಕೋಣೆ ಜತೆಗೆ ಪತ್ರಿಕೆ ಮತ್ತು ಪುಸ್ತಕಗಳ ಓದುವ ಚಿಕ್ಕ ಹಾಲ್‌ಗ‌ಳನ್ನು ನಿರ್ಮಿಸಲಾಗಿದ್ದರಿಂದ ಕುಳಿತು ಓದಲು ಸ್ಥಳಾವಕಾಶದ ಕೊರತೆಯಿದೆ.

ಬೀದರನಲ್ಲಿ ಹೈಟೆಕ್‌ ನಗರ ಕೇಂದ್ರ ಗ್ರಂಥಾಲಯ ನಿರ್ಮಾಣದ ಬೇಡಿಕೆ ಬಹಳ ವರ್ಷಗಳಿಂದ ಇದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿಯೇ ತೋರಿಸಿಲ್ಲ. ಈ ಹಿಂದೆ ಹೈಟೆಕ್‌ ಕಟ್ಟಡಕ್ಕಾಗಿ ಅಂದಾಜು ಒಂದು ಎಕರೆಯಷ್ಟು ಜಮೀನು ಮಂಜೂರು ಮಾಡಲಾಗಿತ್ತು ಮತ್ತು ಕಟ್ಟಡಕ್ಕೆ ತಗುಲುವ ಅಂದಾಜು 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಆದರೆ, ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಬದ್ಧತೆ ಮಾತ್ರ ತೋರಿಸಲಿಲ್ಲ.

ಗ್ರಂಥಾಲಯದಲ್ಲಿ ಸ್ಥಳಾವಕಾಶವಿಲ್ಲದೆ ಪುಸ್ತಕಗಳು ಮೂಟೆಗಳಲ್ಲೇ ಕೊಳೆಯುತ್ತಿವೆ. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತಮಗೆ ಬೇಕಾದ ಸೃಜನಾಶೀಲ ಲೇಖಕರ ಮತ್ತು ಬೇಡಿಕೆ ಪುಸ್ತಕಗಳು ಸಿಗಬೇಕು. ಆದರೆ, ಕೆಲವೊಮ್ಮೆ ಓದುಗರಿಗೆ ಬೇಕಾದ ಪುಸ್ತಕಗಳಿಲ್ಲ. ಇದ್ದರೂ ಲಭ್ಯವಿರುವುದಿಲ್ಲ. ಶೌಚಾಲಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಕುಡಿಯುವ ನೀರನ್ನು ಖರೀದಿಸಿ ತಂದಿಡುವ ಪರಿಸ್ಥಿತಿ ಇದೆ. ದುಸ್ಥಿತಿಯಲ್ಲಿರುವ ಕಟ್ಟಡ ಮತ್ತು ಅವ್ಯವಸ್ಥೆಯಿಂದಾಗಿ ಬರುವ ಸಾರ್ವಜನಿಕರು ಬೇಸತ್ತು ಗ್ರಂಥಾಲಯದಿಂದ
ದೂರಾಗುತ್ತಿದ್ದಾರೆ ಎಂಬ ಕೂಗು ಓದುಗರ ವಲಯದಿಂದಲೇ ಕೇಳಿಬರುತ್ತಿದೆ.

Advertisement

ಇಡೀ ಜಗತ್ತನೇ ಬೆರಳ ತುದಿಯಲ್ಲಿ ನೋಡುವ ಇವತ್ತಿನ ಮಾಹಿತಿ, ತಂತ್ರಜ್ಞಾನ ಅವಿಷ್ಕಾರ ಯುಗದಲ್ಲಿ ಜಿಲ್ಲೆಯ ವಿದ್ಯಾರ್ಥಿ-ಯುವ ಜನತೆಗೆ ಅದರಲ್ಲೂ ಪುಸ್ತಕ ಓದುವ ವಿದ್ಯಾರ್ಥಿ ಸಮೂಹಕ್ಕೆ ಡಿಜಿಟಲ್‌ ಗ್ರಂಥಾಲಯ ಆಶಾಕಿರಣ. ಅಧಿಕಾರಿಗಳು ಬದ್ಧತೆಯಿಂದ ಪ್ರಯತ್ನಿಸಿದ್ದಲ್ಲಿ ಬೀದರನಲ್ಲಿಯೂ ಮೂಲಭೂತ ಸೌಲಭ್ಯಗಳನ್ನು ಒಳಗೊಂಡು ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಡಿಜಿಟಲ್‌ ಲೈಬ್ರರಿ ಆರಂಭಗೊಳ್ಳಬೇಕಾಗಿತ್ತು. ಆದರೆ, ಇತ್ತ
ಆಸಕ್ತಿ ವಹಿಸದಿರುವುದು ಪುಸ್ತಕ ಪ್ರೇಮಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ನಗರ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕಿದೆ. ಇದಕ್ಕಾಗಿ ಅತ್ಯಾಧುನಿಕ ಕಟ್ಟಡ ನಿರ್ಮಿಸಿ ಹೈಟೆಕ್‌ ಸ್ಪರ್ಷ ನೀಡಬೇಕಿದೆ. ಈ ಮೂಲಕ ಪುಸಕ್ತ ಪ್ರೇಮಿಗಳ ಜ್ಞಾನದ ಹಸಿವು ನೀಗಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next