ಬೀದರ: ಅಹಿಂಸಾ ಮಾರ್ಗ ಅನುಸರಿಸಿ ನುಡಿದಂತೆಯೇ ನಡೆದು ತಮ್ಮ ಗುರಿ ಸಾಧಿಸಿದ ಮಹಾತ್ಮ ಗಾಂಧೀಜಿ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಗಾಂಧೀಜಿಗೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಜನ್ಮ ದಿನವನ್ನು ವಿಶ್ವದಾದ್ಯಂತ ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಗಾಂಧೀಜಿ ಜೀವನ ಸಂದೇಶ ಪಾಲಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ರಾಷ್ಟ್ರಪಿತ ಎಂದೇ ಖ್ಯಾತಿ ಗಳಿಸಿರುವ ಮಹಾತ್ಮ ಗಾಂಧೀಜಿ ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು. ಆಫ್ರಿಕಾ ದೇಶದಲ್ಲಿ ಜಾರಿಯಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಪ್ರತಿಭಟನೆ ಆರಂಭಿಸಿದ ಅವರು, ಭಾರತಕ್ಕೆ ಮರಳಿ ಬಂದ ನಂತರ ಬ್ರಿಟಿಷರ ದಾಸ್ಯದಲ್ಲಿದ್ದ ನಮ್ಮ ದೇಶವನ್ನು ಅಹಿಂಸಾ ಅಸ್ತ್ರ ಉಪಯೋಗಿಸಿ ಸ್ವಾತಂತ್ರ್ಯ ಸಿಗುವಂತೆ ಮಾಡಿದರು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಮಾತನಾಡಿ, ಗಾಂಧೀಜಿ ಜನಸಾಮಾನ್ಯರ ಪ್ರತಿನಿಧಿ. ಸಂಸಾರಿಯಾಗಿದ್ದುಕೊಂಡು ಬ್ರಹ್ಮಚರ್ಯ ಜೀವನ ನಡೆಸಿ ದೇಶದ ಹಿತಕ್ಕಾಗಿ ಶ್ರಮಿಸಿದ ಮೇರು ವ್ಯಕ್ತಿತ್ವ. ಸರಳತೆ ಮೈಗೂಡಿಸಿಕೊಂಡು ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟೆಲ್ಲ ಸಾಧಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಪಾಪು ಬಾಪು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಅವರು ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಲೀನಾ, ಆರ್.ಪಿ. ಗೌಡ, ಯಮನಪ್ಪ, ಸಿವಿಲ್ ನ್ಯಾಯಾಧೀಶ ವಿನಾಯಕ, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಜೋಜನಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಸಿ. ಚಂದ್ರಶೇಖರ, ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ವಿಠೊಬಾ ಪತ್ತಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.