Advertisement

ಹಸಿರು ಹೆಚ್ಚಿದರೆ ತಾಪಮಾನ ನಿಯಂತ್ರಣ

10:41 AM Jun 07, 2019 | Team Udayavani |

ಬೀದರ: ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಕಾಲ-ಕಾಲಕ್ಕೆ ಮಳೆಯಾಗಿ, ಅಂತರ್ಜಲ ಮಟ್ಟ ವೃದ್ಧಿಸುವುದರ ಜೊತೆಗೆ ತಾಪಮಾನ ಸರಿಯಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಅಷ್ಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ನಡೆದ ಲಕ್ಷ ವೃಕ್ಷ-ವನ ಮಹೋತ್ಸವ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಸಾಕಷ್ಟು ಮಳೆಯಾಗುತ್ತಿತ್ತು. ದಿನದಿಂದ ದಿನಕ್ಕೆ ಗಿಡಮರಗಳನ್ನು ನಾಶಗೊಳಿಸುತ್ತಿರುವ ಪರಿಣಾಮ ಈಗ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರಿನ ಕೊರತೆ ಜೊತೆಗೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಗಿಡ-ಮರಗಳನ್ನು ಬೆಳೆಸುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ಜೂ.11ರಿಂದ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ನಿಮಿತ್ತ ಒಂದು ತಿಂಗಳು ಪೂರ್ತಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶೌಚಾಲಯಗಳನ್ನು ಬಳಸುವುದರಿಂದ ಹಲವು ರೋಗ-ರುಜಿಗಳನ್ನು ದೂರವಿಡುವ ಜೊತೆಗೆ ಪ್ರಾಣ ಹಾನಿಯನ್ನು ತಪ್ಪಿಸಬಹುದು. ಹಾಗಾಗಿ ಸರ್ಕಾರವು ಶೌಚಾಲಯ ನಿರ್ಮಿಸಿಕೊಳ್ಳಲು ಧನಸಹಾಯ ನೀಡುತ್ತಿದೆ. ಇದರ ಸದುಪಯೋಗ ಪಡೆದು ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಅಲ್ಲದೇ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಅವುಗಳನ್ನು ಸ್ವಂತ ಮಕ್ಕಳಂತೆ ಪೋಷಿಸಿ ಬೆಳೆಸಿದ ಸಾಲು ಮರದ ತಿಮ್ಮಕ್ಕ ಅವರು ಎಲ್ಲರಿಗೂ ಮಾದರಿಯಾಗಬೇಕು. ಅವರಂತೆ ಪ್ರೀತಿಯಿಂದ ಸಸಿಗಳನ್ನು ಬೆಳೆಸುವ ಮನೋಭಾವ ಎಲ್ಲರಲ್ಲೂ ಬರಬೇಕಿದೆ ಎಂದರು.

Advertisement

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ತೋಡುರಕರ್‌ ಮಾತನಾಡಿ, ಸದ್ಯ ಶೇ.20ರಷ್ಟು ಪರಿಸರ ಮಾತ್ರ ಉಳಿದಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಬೇಕು ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ ಮಾತನಾಡಿ, ನಮ್ಮನ್ನು ಕಾಪಾಡುವ ಪರಿಸರದ ರಕ್ಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ಪರಿಸರ ಸಂರಕ್ಷಣೆ ಕುರಿತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧಿಧೀಶ ಸಿದ್ರಾಮ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಾಮನಗಟ್ಟಿ, ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಧನರಾಜ ಬೋರಾಳೆ, ಅಷ್ಟೂರ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಾದೇವ ಪಾಟೀಲ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಧನರಾಜ ಬಿರಾದಾರ, ಜಂಟಿ ಕಾರ್ಯದರ್ಶಿ ಅಂಬದಾಸ ವಾಘರಾಜ, ಖಜಾಂಚಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮೀನಾಕ್ಷಿ, ಮುಖ್ಯಗುರು ರೇಣುಕಾ ನರಸಪ್ಪ, ಸರಸ್ವತಿ ದಯಾನಂದ, ಮಾಣಿಕರಾವ್‌ ಪಾಟೀಲ, ಅರ್ಚನಾ ಶಿವಕುಮಾರ, ಸುಜಾತಾ ಧನರಾಜ, ಲಲಿತಾಬಾಯಿ ಬಾಬುರಾವ್‌ ಹಾಗೂ ಇತರರರು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಅರಣ್ಯ ಇಲಾಖೆ(ಪ್ರಾದೇಶಿಕ ಮತ್ತು ಸಾಮಾಜಿಕ) ವಿಭಾಗ ಹಾಗೂ ಅಷ್ಟೂರ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next