Advertisement

ಜನ್ಮದಿನದಂದು ಸಸಿ ನೆಟ್ಟು ಪರಿಸರ ಉಳಿಸಿ: ಚಿದ್ರಿ

04:09 PM Jul 06, 2019 | Naveen |

ಬೀದರ: ಮನೆಗೊಂದು ಮರ ಊರಿಗೊಂದು ವನವಾಗಬೇಕು. ವಿದ್ಯಾರ್ಥಿಗಳು ಅವರ ಜನ್ಮದಿನದಂದು ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಸಲಹೆ ನೀಡಿದರು.

Advertisement

ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ದಿನೇದಿನೆ ನಾಶವಾಗುತ್ತಿದೆ. ಅರಣ್ಯ ಪ್ರದೇಶಕ್ಕೆ, ರೈತರ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲದಂತಾಗುತ್ತಿದೆ. ಇದು ಅತ್ಯಂತ ನೋವಿನ ಸಂಗತಿ. ನಾವು ಮರಗಳನ್ನು ಕಡಿಯುತ್ತ ಅರಣ್ಯ ನಾಶ ಮಾಡುತ್ತಿರುವುದೇ ಇದಕ್ಕೆ ಕಾರಣ. ಇದು ಬದಲಾಗಬೇಕು. ಪರಿಸರ ನಮ್ಮ ಜೀವ ಇದ್ದಂತೆ. ಅದನ್ನು ಉಳಿಸಿಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು.

ಪರಿಸರ ಉಳಿಯಲು ಮಾಡಬೇಕಾದ ಮೊದಲ ಕಾರ್ಯ ಏನೆಂದರೆ ನಾವು ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕು. ಯಾವುದೇ ಕಾರ್ಯಕ್ರಮ ಇರಲಿ ಆ ವೇಳೆ ನಾವು ಸಸಿ ನೆಡುವಂತಹ ಒಳ್ಳೆಯ ಪರಿಪಾಠ ರೂಢಿಸಿಕೊಳ್ಳಬೇಕು. ನಾನು ಸಸಿ ನೆಡುವ ಕೆಲಸವನ್ನು ತಪ್ಪದೇ ಮಾಡುತ್ತೇನೆ ಎಂದು ಪ್ರತಿಯೊಬ್ಬರು ಶಪತ ಮಾಡಿದಲ್ಲಿ ಖಂಡಿತಾ ಪರಿಸರ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ ಮಾತನಾಡಿ, ಇಡೀ ದೇಶದಲ್ಲಿ ಈ ಒಂದು ವಾರ ಅರಣ್ಯದ ಹಬ್ಬವಿದ್ದಂತೆ. ಜುಲೈ 1ರಿಂದ 7ರ ವರೆಗೆ ಸಸಿಗಳನ್ನು ನೆಡುವ ಮೂಲಕ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

Advertisement

ಈ ವರ್ಷ ಜಿಲ್ಲೆಯ ಸೀಮಿತ ಅರಣ್ಯ ಪ್ರದೇಶದಲ್ಲಿ 3 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಸ್ತೆ ಬದಿಯ ನೆಡುತೋಪ ಮತ್ತು ನಗರ ಪ್ರದೇಶದ ರಸ್ತೆಗಳಲ್ಲಿ ಎತ್ತರವಾದ ಪ್ರದೇಶಗಳಲ್ಲಿ ಎತ್ತರವಾದ ಒಂದು ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ. ಮತ್ತು ಕೃಷಿ ಅರಣ್ಯ ನೆಡುತೋಪುಗಾಗಿ ರೈತರಿಗೆ ಹಾಗೂ ಸಾರ್ವಜನಿರಿಗೆ ವಿತರಣೆಗಾಗಿ 6 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಮಳೆಗಾಲದಲ್ಲಿ ಎಲ್ಲ ಸಸಿಗಳನ್ನು ನೆಟ್ಟು ಗುರಿ ಸಾಧಿಸಲಾಗುತ್ತದೆ ಎಂದು ತಿಳಿಸಿದರು.

ಮರಗಳ ಸಂರಕ್ಷಣೆಯಿಂದ ಮಣ್ಣಿನ ತೇವಾಂಶ ಹೆಚ್ಚಲಿದೆ. ಮರಗಳಿಂದಾಗುವ ಲಾಭಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಗಿಡಗಳನ್ನು ಬೆಳೆಸುವುದರ ಮೂಲಕ ಅರಣ್ಯ ಪ್ರದೇಶವನ್ನು ವಿಸ್ತರಿಸುತ್ತೇವೆ ಎಂದು ಹೇಳಿದರು.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಶಿವಶಂಕರ್‌ ಮಾತನಾಡಿ, ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ 100 ಸಸಿಗಳು ಕೊಡುತ್ತೇವೆ. ಯಾವ ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಬೆಳೆಸುತ್ತಾರೋ ಅವರಿಗೆ ಚಿಂಚೋಳಿ ಅರಣ್ಯ ಪ್ರದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಹೇಳಿದರು.

ಬಗದಲ್ ಜಿಲ್ಲಾ ಪಂಚಾಯತ ಸದಸ್ಯ ಅಫ್ರೂೕಜ್‌ ಖಾನ್‌, ಚಿಟ್ಟಾ ಜಿಲ್ಲಾ ಪಂಚಾಯತ್‌ ಕ್ಷೇತ್ರ ಸದಸ್ಯ ಶಕುಂತಲಾ ಕಾಶೀನಾಥ್‌ ಬೆಲ್ದಾಳೆ, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳಾದ ಶಿವರಾಜ ಮೇಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೆಡೆ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next