ಶಶಿಕಾಂತ ಬಂಬುಳಗೆ
ಬೀದರ: ಎಟಿಎಂ ಕೇಂದ್ರಗಳಲ್ಲಿ ಬೆಚ್ಚಿ ಬೀಳಿಸುವಂಥ ಹಲ್ಲೆ, ದರೋಡೆಯಂಥ ಪ್ರಕರಣಗಳು ಹೆಚ್ಚುತ್ತಿದ್ದರೂ ಗಡಿ ಜಿಲ್ಲೆ ಬೀದರನಲ್ಲಿ ಎಟಿಎಂ ಕೇಂದ್ರಗಳಿಗೆ ಕಾವಲುಗಾರನ ಭದ್ರತೆ (ಗಾರ್ಡ್) ಮತ್ತು ಸಮರ್ಪಕ ಸಿಸಿ ಕ್ಯಾಮರಾಗಳ ಅಳವಡಿಕೆ ವಿಷಯದಲ್ಲಿ ಬ್ಯಾಂಕ್ ಮತ್ತು ಕ್ಯಾಶ್ ಏಜೆನ್ಸಿಗಳು ನಿರಾಸಕ್ತಿ ತೋರುತ್ತಿವೆ.
ಇದರಿಂದ ಎಟಿಎಂ ಗ್ರಾಹಕರಲ್ಲಿ ಅಭದ್ರತೆ ಕಾಡುತ್ತಿದೆ. ಗ್ರಾಹಕರಿಗೆ ತುರ್ತು ಸೇವೆ ಕಲ್ಪಿಸುವ ಉದ್ದೇಶದಿಂದ ಎಟಿಎಂಗಳನ್ನು ಆರಂಭಿಸಿರುವ ಬ್ಯಾಂಕ್ ಗಳು, ಗಾರ್ಡ್‌ಗಳ ನೇಮಕದಲ್ಲಿ ನಿರ್ಲಕ್ಷ್ಯತನದಿಂದ ಎಟಿಎಂ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳ ತಾಣವಾಗುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಭದ್ರತೆ ವಿಷಯದಲ್ಲಿ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದರೂ ಬ್ಯಾಂಕ್‌ಗಳು ನಿಷ್ಕಾಳಜಿ ತೋರುತ್ತಿವೆ. ಹಾಗಾಗಿ ಹಲವೆಡೆ ಬಾಗಿಲು ಹಾಕದೆ ಸದಾ ತೆರೆದ್ದು, ಆತಂಕದ ಸ್ಥಿತಿ ಇದ್ದರೆ, ಮತ್ತೆ ಕೆಲವೆಡೆ ಗಾರ್ಡ್‌ಗಳಿದ್ದರೂ ಎಟಿಎಂ ಒಳಗಡೆಯೇ ನಿದ್ರೆಗೆ ಜಾರಿರುತ್ತಾರೆ.
ಎಟಿಎಂ ಕೇಂದ್ರಗಳಿಗೆ ಭದ್ರತೆ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕ ಸಾರ್ವಜನಿಕ ಸುರಕ್ಷತೆ (ಕ್ರಮಗಳು) ಜಾರಿ ಅ ಧಿನಿಯಮ ಜಾರಿಗೊಳಿಸಿದ್ದು, ಕಡ್ಡಾಯವಾಗಿ ಕೇಂದ್ರಗಳಿಗೆ ಗಾರ್ಡ್‌ಗಳನ್ನು ನೇಮಿಸಬೇಕು ಮತ್ತು ಅಧಿಕ ಪಿಕ್ಸಲ್‌ವುಳ್ಳ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸೂಚಿಸಿದೆ. ಆದರೆ, ಬ್ಯಾಂಕ್‌ಗಳು ಈ ನಿಲಯಗಳನ್ನು ಕಡೆಗಣಿಸುತ್ತಿವೆ. ಬೀದರನ 70 ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 250 ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಅರ್ಧದಷ್ಟು ಬ್ಯಾಂಕ್‌ಗಳು ತಮ್ಮ ಕೇಂದ್ರಗಳಿಗೆ ಮತ್ತು ಅದರ ಗ್ರಾಹಕರಾಗಿರುವ ಜನರ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಇದು ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ.
ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ ಈ ಹಿಂದೆ ಮಹಿಳೆ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿತ್ತು. ಅದರಂತೆ ಬೀದರನಲ್ಲಿಯೂ ಎಟಿಎಂ ಕೇಂದ್ರಗಳಲ್ಲಿ ಅಪರಾಧ ಘಟನೆಗಳು ಸಾಕಷ್ಟಾಗಿವೆ. ನಗರದ ಬಸ್ ನಿಲ್ದಾಣದ ಎಟಿಎಂ, ರೈಲ್ವೆ ನಿಲ್ದಾಣ ಸಮೀಪದ ಎಟಿಎಂನಲ್ಲಿ ದರೋಡೆ ಪ್ರಕರಣಗಳು, ಅಷ್ಟೇ ಅಲ್ಲ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಯಿಂದ ಹಣ ದೋಚಿದ ಹಲವು ಪ್ರಕರಣಗಳು ವರದಿಯಾಗಿವೆ.
ಇದೆಲ್ಲದಕ್ಕೂ ಗಾರ್ಡ್‌ಗಳ ಕೊರತೆಯೇ ಪ್ರಮುಖ ಕಾರಣವಾಗಿದ್ದರೂ ಬ್ಯಾಂಕ್‌ಗಳು ಸುರಕ್ಷತೆ ವಿಷಯದಲ್ಲಿ ಮೌನ ವಹಿಸಿವೆ. ನಗರದಲ್ಲಿವೆ 70 ಎಟಿಎಂಗಳು: ನಗರ ವ್ಯಾಪ್ತಿಯೊಂದರಲ್ಲೇ 20 ಬ್ಯಾಂಕ್‌ಗಳ ಸುಮಾರು 70ಕ್ಕೂ ಹೆಚ್ಚು ಎಟಿಎಂಗಳು ಇವೆ. ಕೆಲವು ಎಟಿಎಂಗಳು ನಗರದ ಜನಸಂದಣಿ ಇರುವ ಹƒದಯ ಭಾಗದಲ್ಲಿದ್ದರೆ ಇನ್ನೂ ಕೆಲವು ಕೇಂದ್ರಗಳು ಹೆಚ್ಚು ಜನಸಂಚಾರವಿಲ್ಲದ ಪ್ರದೇಶಗಳಲ್ಲಿವೆ. ಅಂತಹ ಕಡೆಗಳಲ್ಲಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇತ್ತಿಚೆಗೆ ಎಟಿಎಂ ಕೇಂದ್ರಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ ಹಣ ವಂಚನೆಯಂಥ ಘಟನೆಗಳಿಗೆ ಕಡಿವಾಣ ಹಾಕಲಾಗಿದೆ. ಅದೇ ರೀತಿ ಭದ್ರತೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈಗಲಾದರೂ ಬ್ಯಾಂಕ್‌ಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೇಂದ್ರಗಳಿಗೆ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.