ಕುಮುದಾ ಬಿದನೂರು
ಹೊಸನಗರ: ಎಲ್ಲರ ಕುತೂಹಲ ಮತ್ತು ನಿರೀಕ್ಷೆಗೆ ಕಾರಣವಾಗಿದ್ದ ಹೋಬಳಿ ಕೇಂದ್ರ ನಗರದಲ್ಲಿ ನಡೆದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಜಿಲ್ಲಾಧಿಕಾರಿಗಳ ಸರಳತೆಯ ವ್ಯಕ್ತಿತ್ವಕ್ಕೆ ಜನರಿಂದ ಪ್ರಶಂಸೆಯೂ ವ್ಯಕ್ತವಾಗಿದೆ. ಆದರೆ ಗ್ರಾಮವಾಸ್ತವ್ಯದಿಂದ ನಗರ ಹೋಬಳಿ ಜನರು ಸಾಕಷ್ಟು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ಸಿಕ್ಕೀತೆ ಎಂಬ ಚರ್ಚೆ ಹೋಬಳಿ ತುಂಬೆಲ್ಲಾ ಹರಿದಾಡುತ್ತಿದೆ.
ತಾಲೂಕಿನ ನಗರದಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಗ್ರಾಮವಾಸ್ತವ್ಯ ನಡೆಸಲು ನಿರ್ಧರಿಸುತ್ತಿದ್ದಂತೆ ನಗರ ಹೋಬಳಿಯ ಜನರು ಸಂತಸಗೊಂಡಿದ್ದರು. ಸ್ಥಳೀಯ ಕಂದಾಯ ಇಲಾಖೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದು ಅದನ್ನು ಯಶಸ್ವಿಯಾಗಿ ಮಾಡಿದೆ. ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಬುಧವಾರ ಬೆಳಗ್ಗೆ 7 ಗಂಟೆಗೆ ನಿರ್ಗಮಿಸುವ ಮೂಲಕ ಬಹುನಿರೀಕ್ಷಿತ ಗ್ರಾಮವಾಸ್ತವ್ಯ ಸಮಾಪ್ತಿಗೊಂಡಿತು.
ಹರಿದು ಬಂದ ಅರ್ಜಿ: ನಗರ ಹೋಬಳಿಯಲ್ಲಿ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 250ಕ್ಕು ಹೆಚ್ಚು ಸಮಸ್ಯೆಗಳನ್ನು ಹೊತ್ತ ಅರ್ಜಿಗಳು ಹರಿದು ಬಂದವು. ಇದು ಒಂದಡೆಯಾದರೆ ಜಿಲ್ಲಾಧಿಕಾರಿಗಳ ಜೊತೆಗಿನ ನೇರ ಸಂವಾದದಲ್ಲಿ ನೂರಾರು ಸಮಸ್ಯೆಗಳು ಪ್ರಕಟಗೊಂಡವು. ಕಾಡುಪ್ರಾಣಿಗಳ ಕಾಟ, ಪಹಣಿಯಲ್ಲಿನ ದೋಷ, ಸಿಗದ ಪರಿಹಾರ, ಗ್ರಾಪಂ ಕಚೇರಿಗಳಲ್ಲಿನ ನೆಟ್ವರ್ಕ್ ಸಮಸ್ಯೆ, ಸಂಪರ್ಕ ಅವ್ಯವಸ್ಥೆ, ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಹೀಗೆ ಸತತ ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ನೂರಾರು ಸಂಕಷ್ಟದ ಸಮಸ್ಯೆಗಳು ಪ್ರಕಟಗೊಂಡವು. ಎಲ್ಲಾ ಪ್ರಶ್ನೆಗಳಿಗಳನ್ನು ತಾಳ್ಮೆಯಿಂದ ಆಲಿಸಿದ ಅವರು ಸಮಸ್ಯೆಗೆ ಕಾರಣ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಭರವಸೆಗಳನ್ನು ನೀಡಿದರು.
ಮೂಲೆಗದ್ದೆ ಶ್ರೀಗಳ ಜೊತೆ ಚರ್ಚೆ: ಜನಸ್ಪಂದನ ಸಭೆ ಮುಗಿಸುತ್ತಿದ್ದಂತೆ ತಮ್ಮನ್ನು ಭೇಟಿ ಮಾಡಲು ಬಂದ ಹೊಸನಗರದ ಮೂಲೆಗದ್ದೆ ಚನ್ನಬಸವ ಸ್ವಾಮೀಜಿಯವರನ್ನು ಮೂಡುಗೊಪ್ಪ ಗ್ರಾಪಂ ಕಚೇರಿಯಲ್ಲಿ ಭೇಟಿ ಮಾಡಿದರು. ಬೆಂಗಳೂರಿಗೆ ಲಿಂಗನಮಕ್ಕಿ ನೀರು ನೀಡುವುದನ್ನು ವಿರೋಧಿಸಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಮೂಲೆಗದ್ದೆ ಮಠದ ಶ್ರೀಗಳು ಆ ಸಂಬಂಧ ಕೆಲಹೊತ್ತು ಚರ್ಚಿಸಿದರು. ಶರಾವತಿ ಮತ್ತು ಹೊಸನಗರ ಸಾಗರದ ಭಾವನಾತ್ಮಕ ಸಂಬಂಧದ ಬಗ್ಗೆ ಶ್ರೀಗಳು ವಿವರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಇದು ಸರ್ಕಾರದ ಮಟ್ಟದಲ್ಲಿರುವ ಪ್ರಸ್ತಾಪ. ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆ ವಿಚಾರವನ್ನು ನಾನು ಪ್ರಸ್ತಾಪಿಸುವುದು ಸಮಂಜಸವಲ್ಲ ಎಂದರು.
ಗಮನ ಸೆಳೆದ ಡಿಸಿ ಸರಳತೆ: ನಂತರ ಸರ್ಕಾರಿ ಬಾಲಕರ ಶಾಲೆಯಲ್ಲಿ ರಾತ್ರಿ ಊಟ ಮುಗಿಸಿದ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಅಲ್ಲೇ ವಾಸ್ತವ್ಯ ಮಾಡಿದರು. ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ನಗರಕ್ಕೆ ಆಗಮಿಸುತ್ತಿದ್ದಂತೆ ಜನರೊಂದಿಗೆ ಬೆರೆತ ರೀತಿ, ನಗರಕ್ಕೆ ಬಸ್ಸಿನಲ್ಲೂ ಬಂದ ಮೇಲೂ ಗ್ರಾಪಂ ವ್ಯಾಪ್ತಿಯಲ್ಲಿ ಕೂಡ ಬಸ್ಸಿನಲ್ಲೇ ಸಂಚರಿಸಿದ್ದು ಮತ್ತು ಊಟ ಮಾಡಿದ ನಂತರ ಪ್ಲೇಟನ್ನು ತಾವೇ ಖುದ್ದಾಗಿ ಬಂದು ಕಸದಬುಟ್ಟಿಗೆ ಹಾಕಿದ್ದು ಗಮನ ಸೆಳೆಯಿತು. ಅಲ್ಲದೆ ಸುಮಾರು 4 ಗಂಟೆಗಳ ಕಾಲ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಪ್ರಶ್ನೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಿದ ರೀತಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಸಮಸ್ಯೆಗೆ ಮುಕ್ತಿ ಸಿಗಲಿ: ಒಟ್ಟಾರೆ ನಗರ ಹೋಬಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಜನಸ್ಪಂದನೆ ಮತ್ತು ಗ್ರಾಮವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ ಈ ಸಂದರ್ಭದಲ್ಲಿ ಹರಿದು ಬಂದ ಸಮಸ್ಯೆಗಳ ಅರ್ಜಿ ಆದಷ್ಟು ಬೇಗ ಇತ್ಯರ್ಥವಾಗಲಿ ಎಂಬ ಆಶಯದಲ್ಲಿ ಜನರಿದ್ದಾರೆ.